ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ತಂದೆ ಅವರೊಂದಿಗೆ ನಡೆಸಿದ ಫೋನ್ ಕಾಲ ಸಂಭಾಷಣೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಯತೀಂದ್ರ ಸಿದ್ದರಾಮಯ್ಯ ಅವರ ಸಂಭಾಷಣೆ ವಿಡಿಯೋ ವೈರಲ್ ಆಗುತ್ತಿದ್ದಂತೆ, ವಿರೋಧ ಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮುಗಿಬಿದ್ದಿದ್ದು, ವರ್ಗಾವಣೆ ದಂಧೆಗೆ ಈ ವಿಡಿಯೋನೆ ಸಾಕ್ಷಿ ಎಂಬಂತೆ ಆರೋಪ ಮಾಡಿದವು.
ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ವೈಎಸ್ಟಿ ಟ್ಯಾಕ್ಸ್ ಅಂತ ಆರೋಪಿಸಿದ್ದರು. ಇದೀಗ ಸಂಭಾಷಣೆಯಲ್ಲಿ ಕೇಳಿಬಂದ ವಿವೇಕಾನಂದ ಎಂಬ ಹೆಸರಿನ ವ್ಯಕ್ತಿ ಯಾರು ಎಂಬುವುದನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಪತ್ತೆ ಹಚ್ಚಿದ್ದು, ಸರಣಿ ಟ್ವೀಟ್ ಮೂಲಕ ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ. “ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ಗಂಟೆಗಳ ಒಳಗಾಗಿಯೇ ವರ್ಗದ ಪಟ್ಟಿಯಲ್ಲಿ ಒಳನುಸಳಿದ್ದು ಹೇಗೆ!? ಓಹ್! ಒಂದು ಸರಕಾರ! ವಿಸ್ಮಯಗಳ ಆಗರ!! ಡೂಪ್ಲಿಕೇಟ್ ಸಿಎಂ-ಡಿಸಿಎಂ ಸಲಹೆ ಮೇರೆಗೆ ಕಾಸಿಗಾಗಿ ಹುದ್ದೆ ವಿಡಿಯೋಗೆ ಸಿಎಸ್ಆರ್ ಕಥೆ ಕಟ್ಟಿದ್ದ ಮುಖ್ಯಮಂತ್ರಿಗಳ ನೈತಿಕತೆಗೆ ನಯಗಾರಿಕೆಗೆ ನೂರೆಂಟು ನಮನ” ಎಂದು ವ್ಯಂಗ್ಯವಾಡಿದ್ದಾರೆ.