ಶಿವಮೊಗ್ಗ : ರಾಜ್ಯದ ಮೂಲೆ ಮೂಲೆ ಸುತ್ತಿ ಹಿಂದುಳಿದ ವರ್ಗಗಳ ಬಗ್ಗೆ ಕಾಂತರಾಜ್ ಸಿದ್ಧಪಡಿಸಿದ ವರದಿಯನ್ನು ಬಿಡುಗಡೆ ಮಾಡಲು ಕೆಲವು ಪ್ರಭಾವಿಗಳು ಬಿಡಲಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ದೇವರಾಜ ಅರಸು ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವರದಿ ಸ್ವೀಕಾರ ಮಾಡುವ ಹೊತ್ತಿಗೆ ಸಿದ್ದರಾಮಯ್ಯ ಸರಕಾರದ ಅವಧಿ ಮುಗಿದಿತ್ತು. ಬಳಿಕ ಬಂದ ಸಮ್ಮಿಶ್ರ ಸರಕಾರ ವರದಿ ಬಿಡುಗಡೆ ಮಾಡಬಹುದಿತ್ತು. ಆದರೆ ಅದರ ಬಗ್ಗೆ ಆಸಕ್ತಿ ಯನ್ನೇ ತೋರಲಿಲ್ಲ. ಕೋಟ್ಯಂತರ ರೂ. ವೆಚ್ಚ ಮಾಡಿ ಸಿದ್ಧಪಡಿಸಲಾಗಿದ್ದ ವರದಿ ಹಾಗೇ ಉಳಿಯುವಂತೆ ಮಾಡಲಾಗಿತ್ತು ಎಂದರು.
ಈಗ ಬಿಜೆಪಿ ಸರಕಾರ ಬಂದ ಬಳಿಕ ಆಯೋಗಕ್ಕೆ ಹೊಸ ಅಧ್ಯಕ್ಷರ ನೇಮಕವಾಗಿದೆ. ಕಡತ ಜಯಪ್ರಕಾಶ್ ಹೆಗಡೆಯವರ ಬಳಿ ಇದೆ. ಮುಂದೆ ಏನು ಮಾಡಬೇಕೆಂಬುದನ್ನು ಸರಕಾರ ಪರಿಶೀಲಿಸಲಿದೆ ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗ, ದಲಿತರಿಗೆ ಅನ್ಯಾಯ ಮಾಡಲಾಗುತ್ತದೆ. ಮೀಸಲಾತಿ ತೆಗೆದು ಹಾಕಲಾಗುತ್ತದೆ ಎಂದು ಅಪಪ್ರಚಾರ ಮಾಡಲಾಗಿತ್ತು. ಆದರೆ ಅಂತಹ ಯಾವುದೇ ಪ್ರಸ್ತಾಪಗಳು ಸರಕಾರದ ಮುಂದಿಲ್ಲ ಎಂದರು.
ಹಿಂದುಳಿದ ವರ್ಗ, ದಲಿತರನ್ನು ಉದ್ದಾರ ಮಾಡುವುದಾಗಿ ಹೇಳಲಾಗುತಿತ್ತು. ಆದರೆ ವೈದ್ಯಕೀಯ ಶಿಕ್ಷಣದಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ತರಲು ಮೋದಿ ಬರಬೇಕಾಯಿತು. ವಾಜಪೇಯಿ ಬ್ಯಾಕ್ ಲಾಗ್ ಹುದ್ದೆ ಭರ್ತಿಗೆ ಕ್ರಮ ಕೈಗೊಂಡರೆ ಕೆಲವರು ಅದರ ವಿರುದ್ಧ ಕೋರ್ಟ್ ಗೆ ಹೋದರು. ಇದರಿಂದಾಗಿ ಬ್ಯಾಕ್ ಲಾಗ್ ಭರ್ತಿಗೆ ಹಿನ್ನಡೆಯಾಯಿತು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಆಯನೂರು ಮಂಜುನಾಥ್ ಆರ್ ಪ್ರಸನ್ನಕುಮಾರ್ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷವಿ ರಾಜು ಜಿಪಂ ಸಿಇಒ ವೈಶಾಲಿ ದೇವರಾಜ ಅರಸು ನಿಗಮದ ನಿರ್ದೇಶಕರಾದ ಮಾಲ್ತೇಶ್, ಎನ್ ಮಂಜುನಾಥ್. ಎನ್ ಜಿ ಲೋಕೇಶ್. ಟಿ ರಾಜೇಶ್. ಬಾಳಪ್ಪ. ಸಿಹೊನ್ನಪ್ಪ. ಮಂಜುನಾಥ್ .ಪ್ರಭಾಕರ್. ಪ್ರದೀಪ ಪೊನ್ನಪ್ಪ .ಹಾರ್ನಳ್ಳಿ ಮಂಜುನಾಥ್ .ಚಂದ್ರಶೇಖರ್ ಸೇರಿದಂತೆ ಹಿಂದುಳಿದ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು