ಬೆಂಗಳೂರು : ನಾಳೆ ರಾಜ್ಯಾದ್ಯಂತ ಸರ್ಕಾರಿ ಶಾಲಾ ಶಿಕ್ಷಕರ ಹುದ್ದೆಯ ಅರ್ಹತೆಗಾಗಿ ನಡೆಸುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು (ಕೆ-ಟಿಇಟಿ) ನಡೆಯಲಿದೆ. ವೀಕೆಂಡ್ ಕರ್ಪ್ಯೂ ಇರುವ ಜಿಲ್ಲೆಗಳು ಸೇರಿದಂತೆ ರಾಜ್ಯದ ಎಲ್ಲ ಕಡೆಗಳಲ್ಲೂ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆಯ ಕೇಂದ್ರೀಯ ದಾಖಲಾತಿ ಘಟಕ ತಿಳಿಸಿದೆ.
ಬೆಳಿಗ್ಗೆ 9.30ರಿಂದ 12ರವರೆಗೆ ಹಾಗೂ ಮಧ್ಯಾಹ್ನ 2.30ರಿಂದ 4ರವರೆಗೆ ಕ್ರಮವಾಗಿ ಪತ್ರಿಕೆ-1 ಹಾಗೂ ಪತ್ರಿಕೆ-2ರ ಪರೀಕ್ಷೆ ನಡೆಯಲಿದೆ. ಮೊದಲ ಪತ್ರಿಕೆಗೆ 1,03,267 ಅಭ್ಯರ್ಥಿಗಳು, ಪತ್ರಿಕೆ-2ಕ್ಕೆ 1,51,095 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಪಾಲಿಸಿ 'ಪ್ರಮಾಣಿತ ಕಾರ್ಯಾಚರಣಾ ವಿಧಾನ'ದ (SOP) ಅನುಸಾರ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲಾಗುತ್ತಿದೆ.ಪರೀಕ್ಷಾ ಕೇಂದ್ರಗಳ ಎಲ್ಲ ಕೊಠಡಿಗಳು, ಡೆಸ್ಕ್, ಶೌಚಗೃಹಗಳನ್ನು ಪರೀಕ್ಷೆಯ ಹಿಂದಿನ ದಿನ (ಆ.21) ಸ್ಯಾನಿಟೈಜ್ ಮಾಡಲಾಗುತ್ತದೆ.
ಎರಡೂ ಪತ್ರಿಕೆಗಳ ನಡುವಿನ ಅವಧಿಯಲ್ಲೂ ಅಭ್ಯರ್ಥಿಗಳು ಕುಳಿತುಕೊಳ್ಳುವ ಡೆಸ್ಕ್¬ಗಳನ್ನು ಸ್ಯಾನಿಟೈಜ್ ಮಾಡಲಾಗುತ್ತದೆ. ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದ ಬಳಿ ಆರೋಗ್ಯ ತಪಾಸಣಾ ಕೌಂಟರ್ ಇರಲಿದ್ದು, ಸಿಬ್ಬಂದಿ, ಅಭ್ಯರ್ಥಿಗಳಿಗೆ ಸೇರಿದಂತೆ ಪ್ರತಿಯೊಬ್ಬರನ್ನು ಸ್ಕ್ರೀನಿಂಗ್¬ಗೆ ಒಳಪಡಿಸಲಾಗುತ್ತದೆ. ಕೈಗಳನ್ನು ಸ್ಯಾನಿಟೈಜ್ ಮಾಡಲಾಗುತ್ತದೆ. ಅದಕ್ಕಾಗಿ ಆರೋಗ್ಯ ಇಲಾಖೆಯಿಂದ ಇಬ್ಬರು ಅರೆ ವೈದ್ಯಕೀಯ ಸಿಬ್ಬಂದಿ ಅಥವಾ ಆಶಾ ಕಾರ್ಯಕರ್ತೆಯರನ್ನು ಅಥವಾ ಆರೋಗ್ಯ ತಪಾಸಣೆ ನಡೆಸಬಲ್ಲ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
ಪಲ್ಸ್ ಆಕ್ಸಿಮೀಟರ್, ಥರ್ಮಲ್ ಸ್ಕ್ಯಾನರ್ ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆಯೊಂದಿಗೆ ಸಿಬ್ಬಂದಿ ಹಾಜರಿರಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎಲ್ಲರಿಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಅಭ್ಯರ್ಥಿಗಳ ನಡುವೆ ಕನಿಷ್ಠ 6 ಅಡಿ ಅಂತರ ಕಾಪಾಡುವಂತೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.
ಪರೀಕ್ಷಾ ಕೊಠಡಿ ತಿಳಿದುಕೊಳ್ಳಲು ಉಂಟಾಗುವ ನೂಕು ನುಗ್ಗಲು ತಪ್ಪಿಸಲು ಒಂದು ದಿನ ಮೊದಲೇ (ಆ.21) ಪರೀಕ್ಷಾ ಕೇಂದ್ರದ ಮುಖ್ಯ ಸ್ಥಳದಲ್ಲಿ ಕೊಠಡಿ ಮತ್ತು ಆಸನ ವಿವರಗಳ ಫಲಕವನ್ನು ಇರಿಸಲಾಗುತ್ತದೆ.ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು ಸಾಕಷ್ಟು ಮುಂಚಿತವಾಗಿ ಬರುವ ಕಾರಣ ನೀರಿನ ಬಾಟಲಿ, ಆಹಾರದ ಡಬ್ಬಿ ತೆಗೆದುಕೊಂಡು ಹೋಗಲು ಅವಕಾಶವಿದೆ. ಕೇಂದ್ರದಲ್ಲೂ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಲಾಗಿದೆ.ಕೇರಳ, ಮಹಾರಾಷ್ಟ್ರ ಸೇರಿದಂತೆ ಇನ್ನಿತರ ಹೊರರಾಜ್ಯಗಳಿಂದ ಪರೀಕ್ಷೆ ಬರೆಯಲು ಬರುವವರಿಗೆ RAT ಅಥವಾ RT-PCR ನೆಗೆಟಿವ್ (72 ತಾಸುಗಳ ಒಳಗೆ ಮಾಡಿಸಿರುವ) ವರದಿ ಕಡ್ಡಾಯಗೊಳಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.
ವೀಕೆಂಡ್ ಮತ್ತು ನೈಟ್ ಕರ್ಫ್ಯೂ ವಿನಾಯಿತಿ:
ಕೋವಿಡ್ ದೃಢ ಪ್ರಮಾಣ ಹೆಚ್ಚಾಗಿರುವ ಕೆಲವು ಜಿಲ್ಲೆಗಳಲ್ಲಿ ವೀಕೆಂಡ್ ಮತ್ತು ನೈಟ್ ಕರ್ಫ್ಯೂ ಜಾರಿಯಲ್ಲಿರುವ ಕಾರಣ ಟಿಇಟಿ ಪರೀಕ್ಷೆ ಬರೆಯುತ್ತಿರುವ ಕುರಿತು ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಪೊಲೀಸ್ ಸಿಬ್ಬಂದಿಗೆ ತೋರಿಸಬಹುದು. ಅಭ್ಯರ್ಥಿಗಳಿಗೆ ಕರ್ಫ್ಯೂ ವಿನಾಯಿತಿ ನೀಡಲು ಈಗಾಗಲೇ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.
ವಿಶೇಷ ಕಾಯ್ದಿರಿಸಿದ ಕೊಠಡಿ:
ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಅಂತಹ ಅಭ್ಯರ್ಥಿಗಳಿಗೆ ಪಲ್ಸ್ ಆಕ್ಸಿಮೀಟರ್ ಮೂಲಕ 'oxygen saturation' ಪರಿಶೀಲಿಸಲಾಗುತ್ತದೆ.ಕೋವಿಡ್ ಲಕ್ಷಣಗಳು ಇರುವ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಪ್ರತಿಯೊಂದು ಕೇಂದ್ರದಲ್ಲಿ ಪ್ರತ್ಯೇಕವಾಗಿ 'ಕಾಯ್ದಿರಿಸಿದ ಪರೀಕ್ಷಾ ಕೊಠಡಿ' ವ್ಯವಸ್ಥೆ ಮಾಡಲಾಗಿದೆ. ಪ್ರತಿ ಡೆಸ್ಕ್¬ನಲ್ಲಿ ಒಬ್ಬ ಅಭ್ಯರ್ಥಿ ಮಾತ್ರ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.