ನವದೆಹಲಿ: ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಪರೀಕ್ಷೆಗಳು ಅಥವಾ ಸಿಐಎಸ್ಸಿಇ , ಐಸಿಎಸ್ಇ 10 ನೇ ತರಗತಿ ಮತ್ತು ಐಎಸ್ಇ 12 ನೇ ತರಗತಿ ಫಲಿತಾಂಶವನ್ನು ಶನಿವಾರ ಪ್ರಕಟಿಸಿದೆ. ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಪರೀಕ್ಷೆಯ ಅಧಿಕೃತ ವೆಬ್ಸೈಟ್ಗಳಾದ
cisce.org ಅಥವಾ
results.cisce.org ಮೂಲಕ ಅಭ್ಯರ್ಥಿಗಳು ಫಲಿತಾಂಶವನ್ನು ಪಡೆಯಬಹುದು.
ಕೋರೋನಾ ಎರಡನೇ ಅಲೆಗೆ ತತ್ತರಿಸಿದ್ದ ಇಡೀ ದೇಶದಲ್ಲಿ ಯಾವುದೇ ಶಾಲಾ- ಕಾಲೇಜುಗಳನ್ನು ತೆರೆಯಲು ಅವಕಾಶ ನೀಡಿರಲಿಲ್ಲ. ಈ ಎರಡನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಈ ವರ್ಷ ಎರಡೂ ತರಗತಿಗಳ ಪರೀಕ್ಷೆಗಳನ್ನು ರದ್ದುಗೊಳಿಸಿತ್ತು. ಪರೀಕ್ಷೆ ರದ್ದಾದ ಕಾರಣ ಪರೀಕ್ಷಾ ಮಂಡಳಿಯು ಪರ್ಯಾಯ ಮೌಲ್ಯಮಾಪನ ನೀತಿ ಸಿದ್ದಪಡಿಸಿ ಇದರ ಆಧಾರದ ಮೇಲೆ ಫಲಿತಾಂಶವನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಲಾಗಿದೆ.
ಪರೀಕ್ಷಾ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಗೆರ್ರಿ ಅರಾಥೂನ್, ಜುಲೈ 23 ರ ಶುಕ್ರವಾರದಂದು ಮಾತನಾಡುತ್ತಾ, ಈ ಮೊದಲು ಇದ್ದಂತಹ ಪದ್ದತಿ ಈ ವರ್ಷ ಇರುವುದಿಲ್ಲ ಏಕೆಂದರೆ ಈ ವರ್ಷ ಭಿನ್ನವಾಗಿ, ಐಸಿಎಸ್ಇ ಮತ್ತು ಐಎಸ್ಸಿ ಫಲಿತಾಂಶವನ್ನು ನೀಡಲಾಗಿದೆ. ಆದ ಕಾರಣ ಉತ್ತರವನ್ನು ಮರುಪರಿಶೀಲಿಸುವ ಆಯ್ಕೆ ಈ ವರ್ಷ ಲಭ್ಯವಿರುವುದಿಲ್ಲ ಏಕೆಂದರೆ ಈ ವರ್ಷ ಅಭ್ಯರ್ಥಿಗಳಿಗೆ "ಸೂಚಿತವಾದ ಅಂಕಗಳನ್ನು" ನೀಡಲಾಗಿದೆ. ಈ ಅಂಕಗಳನ್ನು ನೀಡುವಾಗ ಏನಾದರೂ ಲೆಕ್ಕಾಚಾರದಲ್ಲಿ ದೋಷಗಳು ಕಂಡುಬಂದಿದ್ದರೆ, ಆ ದೋಷಗಳನ್ನು ಸರಿಪಡಿಸಲು ಮಂಡಲಿಯು ಒಂದು ಕಾರ್ಯವಿಧಾನವನ್ನು ಸಿದ್ದಪಡಿಸಿದೆ ಎಂದು ಮಾಹಿತಿ ನೀಡಿದರು.
"ಯಾವುದೇ ಅಭ್ಯರ್ಥಿಯ ಫಲಿತಾಂಶದಲ್ಲಿ ಅಂಕಗಳ ಲೆಕ್ಕಾಚಾರದ ಬಗ್ಗೆ ಆಕ್ಷೇಪಣೆ ಇದ್ದರೆ ಅಂತಹ ವಿದ್ಯಾರ್ಥಿಗಳು ಅವರು ಓದುತ್ತಿರುವ ಶಾಲೆಗೆ ಲಿಖಿತ ಅರ್ಜಿಯನ್ನು ಸಲ್ಲಿಸಬಹುದು, ಜೊತೆಗೆ ಯಾವ ಕಾರಣಕ್ಕೆ ನಾವು ಈ ಆಕ್ಷೇಪಣೆಯನ್ನು ಸಲ್ಲಿಸುತ್ತಿದ್ದೇವೆ ಎನ್ನುವ ಕಾರಣಗಳೊಂದಿಗೆ ವಿವರವಾಗಿ ಬರೆದಿರಬೇಕು" ಈ ಎಲ್ಲಾ ಆಕ್ಷೇಪಣೆಗಳು ಆಗಸ್ಟ್ ತಿಂಗಳ 1ರ ಒಳಗೆ ಸಲ್ಲಿಸಬೇಕಾಗಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
"ಫಲಿತಾಂಶವನ್ನು ಬದಲಾಯಿಸಬೇಕಾದರೆ, ಸಿಐಎಸ್ಇ ಸಂಬಂಧಪಟ್ಟ ಶಾಲೆಯ ಮುಖ್ಯಸ್ಥರಿಗೆ ಈ ವಿಚಾರ ತಿಳಿಸುತ್ತದೆ. ಪ್ರಸ್ತುತ ಎಲ್ಲಾ ರೀತಿಯ ವಿವಾದಗಳನ್ನು ಪರಿಹಾರ ಮಾಡಲಾಗುವುದಿಲ್ಲ, ಬದಲಾಗಿ ಅಂಕಗಳನ್ನು ನೀಡುವಾಗ ಉಂಟಾಗಿರುವ ಲೆಕ್ಕಾಚಾರದ ದೋಷಗಳನ್ನು ಸರಿಪಡಿಸಲು ಮಾತ್ರ" ಎಂದು ಅವರು ಹೇಳಿದರು.
CISCE- ICSE 10, ISC ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ ?
ಆ ಶಾಲೆಯ ಪ್ರಾಂಶುಪಾಲರ ಲಾಗ್-ಇನ್ ಐಡಿ ಮತ್ತು ಪಾಸ್ವರ್ಡ್ ಬಳಸಿ ಶಾಲೆಗಳು ಪ್ರಾಧಿಕಾರದ ಪೋರ್ಟಲ್ಗೆ ಲಾಗ್ ಇನ್ ಮಾಡುವ ಮೂಲಕ ಫಲಿತಾಂಶಗಳನ್ನು ಪರಿಶೀಲಿಸಬಹುದು.
ಕಳೆದ ವರ್ಷ, 10 ನೇ ತರಗತಿಯ ಐಸಿಎಸ್ಇ ಪರೀಕ್ಷೆಗಳಿಗೆ 2.07 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ವಿದ್ಯಾರ್ಥಿಗಳಲ್ಲಿ 2.06 ಲಕ್ಷ ವಿದ್ಯಾರ್ತಿಗಳು ಉತ್ತೀರ್ಣರಾಗಿದ್ದರು. 2020 ರಲ್ಲಿ ಫಲಿತಾಂಶವು ಶೇಕಡಾ 99.33 ರಷ್ಟಿತ್ತು.