ಮೂಡುಬಿದಿರೆ (ಜು.22): ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ಶೇ. 100 ಫಲಿತಾಂಶ ದಾಖಲಿಸುವ ಜೊತೆಗೆ 190 ವಿದ್ಯಾರ್ಥಿಗಳು 600ಕ್ಕೆ 600 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ತಿಳಿಸಿದ್ದಾರೆ.
• ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ಶೇ. 100 ಫಲಿತಾಂಶ
• 190 ವಿದ್ಯಾರ್ಥಿಗಳು 600ಕ್ಕೆ 600 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದಾರೆ
ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳ ಸಾಧನೆ ಕುರಿತು ವಿವರಗಳನ್ನು ನೀಡಿದರು
ಪಿಯು ಫಲಿತಾಂಶ ತೃಪ್ತಿಕರವಾಗದಿದ್ದಲ್ಲಿ ಆಗಸ್ಟ್ನಲ್ಲಿ ಪರೀಕ್ಷೆ
ರಾಜ್ಯದಲ್ಲಿ 600 ಅಂಕ ಗಳಿಸಿದ ಸಾಧಕರ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ 445 ವಿದ್ಯಾರ್ಥಿಗಳ ಪೈಕಿ ಆಳ್ವಾಸ್ 190 ವಿದ್ಯಾರ್ಥಿ ಸಾಧಕರೊಂದಿಗೆ ಸಿಂಹಪಾಲು ತನ್ನದಾಗಿಸಿಕೊಂಡಿದೆ. ಈ ಪೈಕಿ ಕನ್ನಡ ಮಾಧ್ಯಮ ಹಿನ್ನೆಲೆಯ ಆಳ್ವಾಸ್ ನ 13 ವಿದ್ಯಾರ್ಥಿಗಳು ಈ ಸಾಧನೆಯಲ್ಲಿ ಸೇರಿದ್ದಾರೆ .
ಪರೀಕ್ಷೆಗೆ ಹಾಜರಾದ ಆಳ್ವಾಸ್ನ 2,510 ವಿದ್ಯಾರ್ಥಿಗಳ ಪೈಕಿ 1,637 ಮಂದಿ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಗಮನಾರ್ಹವಾಗಿದೆ ಎಂದು ಅವರು ತಿಳಿಸಿದರು.
ಪಿಯುಸಿಯಲ್ಲಿ ವಿಷಯವಾರು 3,016 ನೂರಕ್ಕೆ ನೂರು ಅಂಕ ಲಭಿಸಿದೆ. ಈ ಪೈಕಿ ಗಣಿತದಲ್ಲಿ 542, ಇಂಗ್ಲಿಷ್ನಲ್ಲಿ 514 ಮಂದಿ ವಿದ್ಯಾರ್ಥಿಗಳು ವಿಷಯವಾರು ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ.
ಶಿಕ್ಷಣ ಸಚಿವರ ಶ್ಲಾಘನೆ: ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳ ಅಮೋಘ ಸಾಧನೆ ಹಿನ್ನೆಲೆಯಲ್ಲಿ ರಾಜ್ಯದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಂಗಳವಾರ ರಾತ್ರಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಡಾ. ಆಳ್ವ ತಿಳಿಸಿದರು.
ಆಳ್ವಾಸ್ ವಿದ್ಯಾರ್ಥಿಗಳ ಸಾಧನೆಯನ್ನು ರಾಜ್ಯಮಟ್ಟದಲ್ಲಿ ಗಮನಿಸಲಾಗಿದೆ ಎಂದು ಸಚಿವರು ಶ್ಲಾಘಿಸಿರುವುದಾಗಿ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ. ಸದಾಕತ್, ವಿಭಾಗ ಮುಖ್ಯಸ್ಥರುಗಳಾದ ಚಂದ್ರಶೇಖರ್, ವೆಂಕಟೇಶ್ ನಾವಡ, ಜಾನ್ಸಿ, ವಿದ್ಯಾ, ಪ್ರಶಾಂತ್ ಹಾಗೂ ವೇಣುಗೋಪಾಲ ಶೆಟ್ಟಿಉಪಸ್ಥಿತರಿದ್ದರು.