ಬೆಂಗಳೂರು (ಜು. 22): ಎರಡನೇ ದಿನದ ಎಸ್ಎಸ್ಎಲ್ಸಿ ಪರೀಕ್ಷೆ ಇಂದು ಯಶಸ್ವಿಯಾಗಿ ನಡೆದಿದೆ. ಈ ಹಿನ್ನಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೋವಿಡ್ ಆತಂಕದ ನಡುವೆ ಪರೀಕ್ಷೆ ನಡೆಸುವ ಹಿಂದೆ ಯಾವುದೇ ದುರುದ್ದೇಶ ನಮಗಿರಲಿಲ್ಲ. ಸರ್ಕಾರ ಸದ್ದುದ್ದೇಶದಿಂದ ಸಕಲ ಮುನ್ನೆಚ್ಚರಿಕೆ ಕ್ರಮದೊಂದಿಗೆ ಪರೀಕ್ಷೆ ನಡೆಸಿದೆ.
ಇಂದು ಯಶಸ್ವಿಯಾಗಿ ಪರೀಕ್ಷೆ ಮುಗಿದಿದ್ದು, ಈ ಪರೀಕ್ಷೆ ಯಶಸ್ಸಿಗೆ ಕಾರಣರಾದ ನಾಡಿನ ಎಲ್ಲಾ ಶಿಕ್ಷಕ ವೃಂದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹಲವು ಸಂಘ ಸಂಸ್ಥೆಗಳು ನಮ್ಮ ಜೊತೆ ಕೈ ಜೋಡಿಸಿದೆ. ಎಲ್ಲಾ ಶಾಸಕರು ಶಿಕ್ಷಣ ಇಲಾಖೆ ಜೊತೆ ಸಹಕಾರದ ಜೊತೆ ಬೆಂಬಲ ನೀಡಿದ್ದು, ಅವರಿಗೆ ಧನ್ಯವಾದಗಳು ತಿಳಿಸುತ್ತೇನೆ ಎಂದರು .ಎಸ್ಎಸ್ಎಲ್ಸಿ ಪರೀಕ್ಷೆ ಇಂದು ಮುಕ್ತಾಯವಾಗಿದ್ದು, ಒಎಂಆರ್ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಸ್ಕ್ಯಾನಿಂಗ್ಗೆ ಕಳುಹಿಸಿ ನಂತರ ಮೌಲ್ಯಮಾಪನ ಮಾಡಿ ಆಗಸ್ಟ್ 10ರೊಳಗೆ ಫಲಿತಾಂಶ ಪ್ರಕಟ ಮಾಡಲಿದ್ದೇವೆ.
ರಾಜ್ಯದಲ್ಲೆಡೆ ಮಳೆ ಅಬ್ಬರ ಮುಂದುವರೆದಿದೆ. ಈ ವರ್ಷಧಾರೆ ಸಾರಿಗೆ ಕಾರಣದಿಂದ ಯಾವುದೇ ಮಕ್ಕಳು ಗೈರು ಆಗದೇ ಶೇ 99.65ರಷ್ಟು ಹಾಜರಾತಿಯೊಂದಿಗೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಅಬ್ಬರದ ಮಳೆಯ ನಡುವೆಯೂ ಯಶಸ್ವಿಯಾಗಿ ಪರೀಕ್ಷೆ ನಡೆದಿದೆ, ಕಳೆದ ಬಾರಿಗಿಂತ ಈ ಬಾರಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚು ಇದೆ. ಮಕ್ಕಳು ಕೂಡ ಸಂತೋಷ ಮತ್ತು ನಿರಾಳತೆಯೊಂದಿಗೆ ಪರೀಕ್ಷೆ ಬರೆದು ಯಶಸ್ವಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಕೋವಿಡ್ ಕೇರ್ ಸೆಂಟರ್ನಿಂದ 67 ಮಕ್ಕಳು ಪರೀಕ್ಷೆ ಬರೆದಿದ್ದು, ಕೋಲಾರ ಮತ್ತು ಹಾಸನದಲ್ಲಿ ತಲಾ ಒಬ್ಬ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾದರು. ಇನ್ನು ಐಸೋಲೇಷನ್ ಕೊಠಡಿಯಲ್ಲಿ 152 ಮಕ್ಕಳು ಪರೀಕ್ಷೆ ಬರೆದಿದ್ದಾರೆ ಎಂದು ಮಾಹಿತಿ ನೀಡಿದರು
ಜುಲೈ 19ರಂದು ಮೊದಲ ದಿನ ನಡೆದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಇಂದು ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಗಳ ಪರೀಕ್ಷೆ ಬರೆದರು.
ಯಶೋಗಾಥೆ ಪುಸ್ತಕ ಬಿಡುಗಡೆಗೆ ಸಜ್ಜುಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಕರ್ನಾಟಕದ ಇತಿಹಾಸದಲ್ಲೇ ವಿಭಿನ್ನ. ಕೇರಳ, ಮಿಝೋರಂ, ನಾಗಲ್ಯಾಂಡ್, ಮೇಘಲೆಂಡ್ ಮಾತ್ರ ಎರಡನೇ ಅಲೆಗೂ ಮುಂಚಿತವಾಗಿ ಪರೀಕ್ಷೆ ಮುಗಿಸಿತ್ತು. ಕರ್ನಾಟಕ ಮಾತ್ರ ಕೊರೋನಾ ನಡುವೆಯೂ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಇದೇ ಹಿನ್ನಲೆ ಈ ಬಾರಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆ ಬಗ್ಗೆ ಪುಸ್ತಕ ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದ್ದು, 'ಯಶೋಗಾಥೆ' ಹೆಸರಿನಲ್ಲಿ ಪುಸ್ತಕ ಬಿಡುಗಡೆ ಮಾಡಲಿದ್ದೇವೆ.
ಪುಸ್ತಕದಲ್ಲಿ ಪರೀಕ್ಷೆ ನಡೆಸಲು ಇಲಾಖೆ ತೆಗೆದುಕೊಂಡ ಕ್ರಮ, ನಿರ್ಧಾರ ಹಾಗೂ ಸಿದ್ಧತೆ, ಪರೀಕ್ಷೆ ವೇಳೆ ನಡೆದ ಇಂಟ್ರೆಸ್ಟಿಂಗ್ ವಿಚಾರಗಳು ಪುಸ್ತಕದಲ್ಲಿ ಇರಲಿದೆ. ಇಂತಹ ಸವಾಲಿನ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸಿದ ಕ್ರಮ ಇದೊಂದು ಪಾಠವಾಗಿದ್ದು, ಇದನ್ನು ಮರೆಯ ಬಾರದು. ಇದೇ ಉದ್ದೇಶದಿಂದಲೇ ಪುಸ್ತಕ ತರಲಾಗುವುದು. ಮುಂದಿನ ದಿನಗಳಲ್ಲಿ ಈ ರೀತಿಯಾದರೆ ರೆಫರೆನ್ಸ್ ಆಗಿರಬೇಕು. ಈ ಕಾರಣದಿಂದ ಯಶೋಗಾಥೆ ಹೆಸರಿನಲ್ಲಿ ಪುಸ್ತಕ ತರಲು ಸಿದ್ದತೆ ನಡೆಸಲಾಗಿದೆ ಎಂದರು