ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಆಯುಷ್ಮಾನ್ ಭಾರತ್ ಯೋಜನೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೂ ವಿಸ್ತರಿಸಿದೆ. ಇಂದಿನಿಂದ ಹಿರಿಯ ನಾಗರಿಕರು ಆಯುಷ್ಮಾನ್ ಭಾರತ್ ಕಾರ್ಡ್ ಗೆ ನೋಂದಣಿ ಮಾಡಬಹುದು. ಹೇಗೆ ಎಂಬ ವಿವರ ಇಲ್ಲಿದೆ.
ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಯೋಜನೆಯನ್ನು ಈಗ 70 ವರ್ಷ ಮೇಲ್ಪಟ್ಟ ವಯೋವೃದ್ಧರಿಗೂ ವಿಸ್ತರಿಸಲಾಗಿದೆ. ಈ ಯೋಜನೆಯಡಿಯಲ್ಲಿ 5 ಲಕ್ಷ ರೂ.ವರೆಗಿನ ಚಿಕಿತ್ಸಾ ವೆಚ್ಚ ಉಚಿತವಾಗಿ ಸಿಗಲಿದೆ. ಹೃದಯ ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಟ್ರೀಟ್ ಮೆಂಟ್ ನಂತಹ ಮಾರಕ ರೋಗಗಳಿಂದ ಹಿಡಿದು 1,500 ಕ್ಕೂ ಹೆಚ್ಚು ವಿವಿಧ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಇದರಿಂದ ಭರಿಸಬಹುದಾಗಿದೆ.
ಈ ಯೋಜನೆಯಡಿ ವಯಸ್ಸಾದವರು, ಆರ್ಥಿಕವಾಗಿ ದುರ್ಬಲರಾದವರಿಗೆ ವೈದ್ಯಕೀಯ ಚಿಕಿತ್ಸಾ ವೆಚ್ಚದ ಹೊರೆ ತಗ್ಗಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಈಗಾಗಲೇ ಆಯುಷ್ಮಾನ್ ಭಾರತ್ ಯೋಜನೆಯಡಿ 34 ಕೋಟಿ ಕಾರ್ಡ್ ಗಳನ್ನು ವಿತರಿಸಲಾಗಿದೆ. ಇದೀಗ 6 ಕೋಟಿ ಕಾರ್ಡ್ ವಿತರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ.
ಈ ಯೋಜನೆಯ ಫಲಾನುಭವಿಗಳು ದೇಶದಾದ್ಯಂತ ಪಟ್ಟಿ ಮಾಡಲಾದ 29,000 ಕ್ಕೂ ಅಧಿಕ ಆಸ್ಪತ್ರೆಗಳಲ್ಲಿ ನಗದುರಹಿತ ಆರೋಗ್ಯ ಸೇವೆಗಳನ್ನು ಪಡೆಯಬಹುದಾಗಿದೆ.
ಆಯುಷ್ಮಾನ್ ಕಾರ್ಡ್ ಗೆ ನೊಂದಾಯಿಸುವುದು ಹೇಗೆ? https://beneficiary.nha.gov.in ಎಂಬ ವೆಬ್ ಸೈಟ್ ಗೆ ಭೇಟಿ ನೀಡಿದ ಆನ್ ಲೈನ್ ಮುಖಾಂತರ ನೊಂದಾಯಿಸಬಹುದು.
ಕಸ್ಟಮರ್ ಲಾಗಿನ್ ಮಾಡಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
ನಿಮ್ಮ ಫೋನ್ ಗೆ ಒಟಿಪಿ ಬರುತ್ತದೆ, ಅದನ್ನು ನಮೂದಿಸಬೇಕು
ಬಳಿಕ ನಿಮ್ಮ ಹೆಸರು, ಆಧಾರ್ ಸಂಖ್ಯೆ ಅಥವಾ ಪಡಿತರ ಚೀಟಿ ಬಳಸಿಕೊಂಡು ಅರ್ಹತೆಯನ್ನು ಪರಿಶೀಲಿಸಬಹುದು.
ಅರ್ಹತೆ ಇದ್ದರೆ ಆಧಾರ್ ಇ-ಕೆವೈಸಿ ಜೊತೆಗೆ ವಿವರಗಳನ್ನು ಪರಿಶೀಲಿಸಿ.
ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ಇತ್ತೀಚೆಗಿನ ಫೋಟೋವನ್ನು ಅಪ್ ಲೋಡ್ ಮಾಡಿ. ನಂತರ, ನಿಮ್ಮ ಆಯುಷ್ಮಾನ್ ಭಾರತ್ ಕಾರ್ಡ್ ನ್ನು ಡೌನ್ ಲೋಡ್ ಮಾಡಿ.
ಬೇಕಾಗುವ ದಾಖಲೆಗಳು
ಆಧಾರ್ ಕಾರ್ಡ್
ನಿವಾಸದ ಪುರಾವೆ
ಇತ್ತೀಚೆಗಿನ ಭಾವಚಿತ್ರ
ನೋಂದಣಿ ಮಾಡಿದವರ ಅರ್ಹತೆಗನುಗುಣವಾಗಿ ಕಾರ್ಡ್ ವಿತರಿಸಲಾಗುತ್ತದೆ.