ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹ ರೈತರಿಗೆ ನೀಡಲಾಗುವ ಸಹಾಯಧನದ 18 ನೇ ಕಂತು ಬಿಡುಗಡೆ ಯಾವಾಗ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಕೆಲವು ವರದಿಗಳ ಪ್ರಕಾರ ಅಕ್ಟೋಬರ್ 5 ಕ್ಕೆ 18 ನೇ ಕಂತಿನ ಹಣ ಬಿಡುಗಡೆಯಾಗಲಿದೆ.
ಪ್ರಧಾನಿ ಮೋದಿ ಸರ್ಕಾರದ ಮಹತ್ವಾಕಾಂಕ್ಷ ಯೋಜನೆಗಳಲ್ಲಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯೂ ಒಂದು. 2019 ರಲ್ಲಿ ಈ ಯೋಜನೆಯನ್ನು ಆರಂಭಿಸಲಾಯಿತು. ಅದರಂತೆ ಎಲ್ಲಾ ನೊಂದಾಯಿತ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂ. ಸಹಾಯ ಧನವನ್ನು ನೀಡಲಾಗುತ್ತಿದೆ.
ಪ್ರತೀ ಕಂತಿನಲ್ಲಿ 2,000 ರೂ. ನೀಡಲಾಗುತ್ತದೆ. ಇದು ರೈತರ ನೊಂದಾಯಿತ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ. ಎರಡು ಹೆಕ್ಟೇರ್ ಅಥವಾ ಐದು ಎಕರೆಯೊಳಗಿನ ಜಮೀನು ಹೊಂದಿರುವ ರೈತರು ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗಿರುತ್ತಾರೆ.
ಆದರೆ ಸರ್ಕಾರೀ ವೃತ್ತಿಯಲ್ಲಿರುವವರಿಗೆ, ಜನಪ್ರತಿನಿಧಿಗಳಿಗೆ, ವೈದ್ಯ, ಬ್ಯಾಂಕ್ ವೃತ್ತಿಯವರಿಗೆ, ತೆರಿಗೆ ಪಾವತಿಸುತ್ತಿರುವವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಈಗಾಗಲೇ ಸುಮಾರು 10 ಕೋಟಿ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇದುವರೆಗೆ 17 ಕಂತು ಸಂದಾಯವಾಗಿದ್ದು, ಇದೀಗ 18 ನೇ ಕಂತು ಸಂದಾಯವಾಗಲಿದೆ.