ಬೆಂಗಳೂರಿನಲ್ಲಿ ಕಳೆದ 10 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.ನಗರದಲ್ಲಿ ಮೆಜಸ್ಟಿಕ್, ಶಾಂತಿನಗರ, ನಾಗರಬಾವಿ, ಮಾನ್ಯತಾ ಟೆಕ್ ಪಾರ್ಜ್, ಜಯನಗರ ಬಡಾವಣೆ, ಬನಶಂಕರಿ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ರಾತ್ರಿ ಇಡೀ ಮಳೆ ಸುರಿದಿದೆ.
ಹೈರಾಣಾದ ವಾಹನ ಸವಾರರು:
ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಎಂಜಿ ರಸ್ತೆ, ಕೆ.ಜಿ.ರಸ್ತೆ, ಸಿಟಿ ಮಾರ್ಕೇಟ್, ಕಾರ್ಪೋರೇಷನ್, ಕೆ.ಆರ್ ಸರ್ಕಲ್, ಚಾಲುಕ್ಯ ಸರ್ಕಲ್, ವಿಂಡ್ಸರ್ ಮ್ಯಾನರ್, ಮಲ್ಲೇಶ್ವರ, ಯಶವಂತಪುರ, ಹೆಬ್ಬಾಳ, ಪೀಣ್ಯ ಸೇರಿದಂತೆ ಹಲವೆಡೆ ಪ್ರಮುಖ ರಸ್ತೆಗಳು ಟ್ರಾಫಿಕ್ ಜಾಮ್ ಉಂಟಾಗಿತ್ತು.
ಕೆಲವು ಪ್ರದೇಶಗಳಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆಯ ಮೇಲೆ 3 ಅಡಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು.
ಸಿಎಂ ಸಭೆ:
ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆ ಹಿನ್ನೆಲೆ ಇಂದು ಮಧ್ಯಾಹ್ನ ಸಿಎಂ ಬಸವರಾಜ್ ಬೊಮ್ಮಾಯಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ಮಳೆ ಹಾನಿ, ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ.
ಭಾರೀ ಮಳೆಗೆ ಕುಸಿದ ಮನೆ:
ಭಾರೀ ಮಳೆ ಹಿನ್ನೆಲೆ ಬೆಂಗಳೂರಿನ ಲಿಡೋ ಮಾಲ್ ಬಳಿ ಮನೆ ಕುಸಿದಿದ್ದು, ಮನೆಯಲ್ಲಿ ಯಾರು ಇಲ್ಲದ ಪರಿಣಾಮ ಭಾರಿ ಅಪಾಯ ತಪ್ಪಿದಂತಾಗಿದೆ.
ಶಾಲೆಗಳಿಗೆ ರಜೆ:
ಕಳೆದ ಹಲವು ದಿನಗಳಿಂದ ಬೆಂಗಳೂರು ನಗರದಲ್ಲಿ ಭಾರೀ ಮಳೆಯಾಗುತ್ತಿದ್ದು, ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಎಲ್ಲೆಲ್ಲಿ ಮಳೆ..?
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮೆಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.