Publish Date: Wed, 15 May 2024 (09:41 IST)
Updated Date: Wed, 15 May 2024 (09:48 IST)
ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್ ಡಿ ರೇವಣ್ಣ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೇ ದೇವಾಲಯಗಳಿಗೆ ಭೇಟಿ ಕೊಟ್ಟಿದ್ದಾರೆ. ಇಂದೂ ಅವರ ಟೆಂಪಲ್ ರನ್ ಮುಂದುವರಿಯಲಿದೆ.
ನಿನ್ನೆ ಮನೆಗೆ ಬಂದ ತಕ್ಷಣ ಊಟ ಮುಗಿಸಿಕೊಂಡು ದೇವಾಲಯಗಳಿಗೆ ತೆರಳಿದ ರೇವಣ್ಣ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಂಜೆ ನಾಡದೇವತೆ ಚಾಮುಂಡೇಶ‍್ವರಿ ಸನ್ನಿಧಾನಕ್ಕೂ ಭೇಟಿ ಕೊಟ್ಟಿದ್ದು ಪುತ್ರ ಪ್ರಜ್ವಲ್ ರೇವಣ್ಣ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಇಂದೂ ಅವರು ದೇವಾಲಯಗಳಿಗೆ ತೆರಳಿದ್ದಾರೆ.
ಇಂದು ರೇವಣ್ಣ ತವರು ಹಾಸನಕ್ಕೆ ಭೇಟಿ ನೀಡಲಿದ್ದಾರೆ. ಇಲ್ಲಿ ಮನೆದೇವರು ಹರದನಹಳ್ಳಿಯ ನರಸಿಂಹಸ್ವಾಮಿ ದೇವಸ್ಥಾನ ಮತ್ತು ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ಸಾಧ‍್ಯತೆಯಿದೆ. ಜೊತೆಗೆ ತವರಿನಲ್ಲಿ ಕಾರ್ಯಕರ್ತರನ್ನೂ ಭೇಟಿಯಾಗುವ ಸಾಧ‍್ಯತೆಯಿದೆ.
ನಿನ್ನೆ ರೇವಣ್ಣ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೇ ಕುಟುಂಬ ಸದಸ್ಯರು ಅವರನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಬಿಜೆಪಿ ಶಾಸಕ ಮುನಿರತ್ನ ಕೂಡಾ ದೇವೇಗೌಡರ ನಿವಾಸಕ್ಕೆ ತೆರಳಿದ್ದರು. ಜೈಲಿನಿಂದ ಹೊರಬರುತ್ತಿದ್ದಂತೇ ತಮಗಾಗಿ ಕಾದು ಕುಳಿತಿದ್ದ ಕಾರ್ಯಕರ್ತರನ್ನು ನೋಡಿ ರೇವಣ್ಣ ಭಾವುಕರಾಗಿದ್ದರು.