ಹಾಸನ: ನನ್ನನ್ನು ಯಾರೂ ಅಪಹರಿಸಿಲ್ಲ, ನಾಲ್ಕು ದಿನ ನೆಂಟರ ಮನೆಗೆ ಹೋಗಿ ಬರೋಣ ಎಂದು ಬಂದಿದ್ದೆ ಎಂದು ಅಪಹರಣಕ್ಕೊಳಗಾಗಿದ್ದಾಳೆ ಎನ್ನಲಾಗಿದ್ದ ಮಹಿಳೆ ಹೇಳಿಕೆ ನೀಡಿದ್ದು ಬಂಧಿತರಾಗಿರುವ ಮಾಜಿ ಸಚಿವ ಎಚ್ ಡಿ ರೇವಣ್ಣಗೆ ಇದರಿಂದ ಲಾಭವಾಗಲಿದೆ.
ಮಹಿಳೆಯರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್ ಡಿ ರೇವಣ್ಣರನ್ನು ಬಂಧಿಸಲಾಗಿತ್ತು. ಈ ಸಂಬಂಧ ರೇವಣ್ಣ ಆಪ್ತನನ್ನೂ ಬಂಧಿಸಲಾಗಿತ್ತು. ಅಲ್ಲದೆ, ಭವಾನಿ ರೇವಣ್ಣಗೂ ನೋಟಿಸ್ ನೀಡಲಾಗಿತ್ತು. ಆದರೆ ಈಗ ಮಹಿಳೆ ವಿಡಿಯೋವೊಂದನ್ನು ಬಿಡುಗಡೆ ಮಾಡಿ ನನ್ನನ್ನು ಯಾರೂ ಅಪಹರಿಸಿಲ್ಲ ಎಂದಿರುವುದು ಪ್ರಕರಣಕ್ಕೆ ಟ್ವಿಸ್ಟ್ ನೀಡಿದೆ.
ನನ್ನನ್ನು ಯಾರೂ ಅಪಹರಿಸಿಲ್ಲ. ನಾನಾಗಿಯೇ ಮನೆಯಿಂದ ಹೊರಬಂದಿದ್ದೇನೆ. ಭವಾನಿ ರೇವಣ್ಣ, ಪ್ರಜ್ವಲ್, ಬಾಬಣ‍್ಣರಿಂದ ನನಗೆ ಯಾವುದೇ ತೊಂದರೆಯಾಗಿಲ್ಲ. ನಮ್ಮ ಊರಿನವರು ಏನೇನೋ ಹೇಳುವುದು ಕೇಳಿ ಬೇಸರವಾಗಿತ್ತು. ಹೀಗಾಗಿ ನೆಂಟರ ಮನೆಗೆ ಹೋಗಿದ್ದೆ. ಎರಡು ದಿನಗಳ ಬಳಿಕ ನಾನೇ ಬರುತ್ತೇನೆ. ದಯವಿಟ್ಟು ಯಾರೂ ಮನೆ ಹತ್ರ ಬಂದು ನಮಗೆ ತೊಂದರೆ ಕೊಡಬೇಡಿ. ಮನೆ ಹತ್ರ ಪೊಲೀಸರು ಬಂದರೆ ಅಕ್ಕಪಕ್ಕದವರು ಏನಂದುಕೊಳ್ಳಲ್ಲ? ಮಕ್ಕಳು ಗಾಬರಿಯಾಗುತ್ತಾರೆ. ನನಗೆ, ನನ್ನ ಗಂಡ, ಮಕ್ಕಳಿಗೆ ಏನಾದರೂ ಆದರೆ ನೀವೇ ಹೊಣೆಯಾಗಬೇಕಾಗುತ್ತದೆ. ಅದಕ್ಕೆ ರೆಡಿ ಎಂದರೆ ಬರಬಹುದು ಎಂದು ಮಹಿಳೆ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾಳೆ.
ಆಕೆಯ ಈ ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ನೀಡಲಿದೆ. ಸದ್ಯಕ್ಕೆ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಎಚ್ ಡಿ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮೇ 14 ರವರೆಗೆ ಅಂದರೆ ನಾಳೆಯವರೆಗೆ ಅವರ ನ್ಯಾಯಾಂಗ ಬಂಧನ ಅವಧಿಯಿದೆ.