ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ಎಚ್ ಡಿ ರೇವಣ್ಣ ಇಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ನಿನ್ನೆ ಸಂಜೆಯೇ ಅವರಿಗೆ ಜಾಮೀನು ಮಂಜೂರಾಗಿತ್ತು. ಆದರೆ ಆದೇಶ ಪ್ರತಿ ಜೈಲು ಅಧಿಕಾರಿಗಳಿಗೆ ಸಿಗುವ ತನಕ ಬಿಡುಗಡೆ ಸಾಧ‍್ಯವಿಲ್ಲ. ಹೀಗಾಗಿ ಇಂದು ರೇವಣ್ಣ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ. ಜಾಮೀನು ಸಿಕ್ಕ ಬೆನ್ನಲ್ಲೇ ರೇವಣ್ಣ ದೇವರಿಗೆ ಧನ್ಯವಾದ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ರೇವಣ್ಣ ಸೂಚನೆ ಮೇರೆಗೇ ಅವರ ಆಪ್ತರು ಮಹಿಳೆಯನ್ನು ಅಪಹರಿಸಿದ್ದರು ಎಂಬುದಕ್ಕೆ ಎಸ್ಐಟಿ ತಂಡ ಸೂಕ್ತ ಸಾಕ್ಷ್ಯ ಒದಗಿಸುವಲ್ಲಿ ವಿಫಲವಾಗಿದೆ. ಈ ಮೊದಲು ಕೋರ್ಟ್ ಗೆ ಸಲ್ಲಿಸಲಾಗಿದ್ದ ರಿಮ್ಯಾಂಡ್ ಅಪ್ಲಿಕೇಷನ್ ನಲ್ಲಿ ಕೆಲವು ವಿಚಾರಗಳನ್ನು ಎಸ್ಐಟಿ ಉಲ್ಲೇಖಿಸಿಲ್ಲ. ಇದರ ಜೊತೆಗೆ ಸಂತ್ರಸ್ತ ಮಹಿಳೆಯೂ ಮೊನ್ನೆ ವಿಡಿಯೋ ಬಿಡುಗಡೆ ಮಾಡಿ ನನಗೆ ರೇವಣ್ಣ ಮತ್ತು ಆಪ್ತರಿಂದ ಯಾವುದೇ ತೊಂದರೆಯಾಗಿಲ್ಲ. ಯಾರೂ ನನ್ನನ್ನು ಅಪಹರಿಸಿಲ್ಲ ಎಂದು ಹೇಳಿಕೆ ನೀಡಿದ್ದಳು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರೇವಣ್ಣಗೆ 7 ಷರತ್ತುಗಳೊಂದಿಗೆ ಜಾಮೀನು ನೀಡಲಾಗಿದೆ.
ಇಂದು ಬೆಳಿಗ್ಗೆಯೇ ನ್ಯಾಯಾಲಯದಿಂದ ಆದೇಶ ಪ್ರತಿ ಪಡೆದು, ಷ್ಯೂರಿಟಿ ಬಾಂಡ್ ಗಳನ್ನು ನೀಡಲಾಗುತ್ತದೆ. ಈ ಆದೇಶ ಪ್ರತಿಯನ್ನು ಜೈಲು ಅಧಿಕಾರಿಗಳಿಗೆ ಸಲ್ಲಿಸಬೇಕಾಗುತ್ತದೆ. ಅದಾದ ಬಳಿಕ ಸಂಜೆ ರೇವಣ್ಣ ಬಿಡುಗಡೆಯಾಗಲಿದೆ.