ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್ ಡಿ ರೇವಣ್ಣ ಇಂದು ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಾರೆ. ಆದರೆ ಅವರಿಗೆ ಜಾಮೀನು ಸಿಕ್ಕಿರುವುದಕ್ಕೆ ನನಗೆ ಖುಷಿಯಾಗಿಲ್ಲ ಎಂದು ಸಹೋದರ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಎಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದ್ದಕ್ಕೆ ಅವರ ಅಭಿಮಾನಿಗಳು ಹೊಳೆನರಸೀಪುರದಲ್ಲಿ ಸಂಭ್ರಮಿಸುತ್ತಿದ್ದಾರೆ. ಕುಟುಂಬಸ್ಥರೂ ಕೊಂಚ ನಿರಾಳವಾಗಿದ್ದಾರೆ. ಆದರೆ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಸಂಭ್ರಮ ಬೇಡ, ನನಗೆ ಖುಷಿಯಾಗಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಅತ್ಯಂತ ಹೀನಾಯ ಘಟನೆ ನಡೆದಿದೆ. ರೇವಣ್ಣಗೆ ಜಾಮೀನು ಸಿಕ್ಕಿದೆ ಎಂದು ಸಂಭ್ರಮ ಬೇಡ. ಇದು ಸಂಭ್ರಮಿಸುವ ಸಮಯವೂ ಅಲ್ಲ. ನನಗೆ ಇದರಿಂದ ಖುಷಿಯಾಗಿಲ್ಲ. ಕಾರ್ಯಕರ್ತರು ಸಂಭ್ರಮಿಸುವ ಕ್ಷಣವಲ್ಲ. ಇಡೀ ರಾಜ್ಯವೇ ತಲೆ ತಗ್ಗಿಸುವ ಘಟನೆ ಎಂದು ಅಚ್ಚರಿ ಮೂಡಿಸಿದ್ದಾರೆ.
ಪೆನ್ ಡ್ರೈವ್ ಕೊಟ್ಟವರು ಯಾರು ಎಂದು ಎಸ್ಐಟಿ ತನಿಖೆ ಮಾಡುತ್ತಿಲ್ಲ. ಎಸ್ಐಟಿ ತನಿಖೆ ಶಾಸಕರಿಗೆ ಸರಬರಾಜಾಗುತ್ತಿದೆ. ನಮ್ಮ ರಾಜ್ಯದಲ್ಲಿ ದೊಡ್ಡ ತಿಮಿಂಗಲ ಇದೆ. ಅದು ಯಾರೆಂದು ಎಲ್ಲರಿಗೂ ಗೊತ್ತಿದೆ. ಏಪ್ರಿಲ್ 22 ರಂದು ದಾಖಲಾದ ಎಫ್ಐಆರ್ ಗೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಪೆನ್ ಡ್ರೈವ್ ಹಗರಣ ದೊಡ್ಡ ಮಟ್ಟದಲ್ಲಿ ನಡೆದಿದೆ. ರೇವಣ್ಣ ಕುಟುಂಬ ಮುಗಿಸಲು ನಾನು ಪ್ಲ್ಯಾನ್ ಮಾಡಿಲ್ಲ. ಎಲ್ಲವೂ ತನಿಖೆಯಿಂದ ಗೊತ್ತಾಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.