ಬೆಳಗಾವಿ : ಬೆಳಗಾವಿ ಅಧಿವೇಶನದಲ್ಲಿ ಮತಾಂತರ ಕಾಯ್ದೆ ವಿಚಾರವಾಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕೇಂದ್ರ ಕೃಷಿ ಇಲಾಖೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಮತಾಂತರ ಕಾಯ್ದೆ ವಿಚಾರವಾಗಿ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳುತ್ತದೆ. ಮಂಗಳೂರು ಆತ್ಮಹತ್ಯೆ, ಲವ್ ಜಿಹಾದಿ ಪ್ರಕರಣಗಳ ನಂತರ, ದೇಶದಲ್ಲಿ ಮತಾಂತರ ಕಾಯ್ದೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ.
ದೊಡ್ಡ ಪ್ರಮಾಣದಲ್ಲಿ ಎಲ್ಲ ಜಾತಿ ವರ್ಗದ ಜನರನ್ನು ಅವರ ಬಡತನ, ಅನಾರೋಗ್ಯ ಸಂದರ್ಭ ಮುಂದಿಟ್ಟುಕೊಂಡು ಮತಾಂತರಗೊಳಿಸುವುದು ನಡೆಯುತ್ತಿದೆ. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚನೆ ಮಾಡಬೇಕು ಎಂದರು.
ನಮ್ಮ ಬಡತನ ನಮ್ಮ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳಲು ಯಾರಿಗೂ ಅವಕಾಶ ಕೊಡಬಾರದು. ನಾವು ಕೂಡ ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಬೇಕು. ಯಾವ ಕಾರಣಕ್ಕೆ ಧರ್ಮವನ್ನು ಬಿಟ್ಟು ಹೋಗೋದಕ್ಕೆ ಸಾಧ್ಯವಾಗಿದೆ.
ಇದಕ್ಕೆ ಜಾತಿ ಕಾರಣವೋ, ಆರೋಗ್ಯ ಕಾರಣವೋ, ಆರ್ಥಿಕ ಪರಿಸ್ಥಿತ ಕಾರಣವೋ, ಸಾಮಾಜಿಕ ಅಡತಡೆಗಳು ಕಾರಣವೋ ಎನ್ನುವುದನ್ನು ಪ್ರಾಮಾಣಿಕವಾಗಿ ಅಧ್ಯಯನ ಮಾಡಬೇಕು. ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.