ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರ ಪ್ರಯತ್ನ ಫಲವಾಗಿ ಈ ಸಂಬAಧ ಸಾರಿಗೆ ಇಲಾಖೆ ಜತೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈಗಾಗಲೇ ಈ ಯೋಜನೆಯನ್ನು ಜಾರಿಗೊಳಿಸಿದೆ. ದಿನ ನಿತ್ಯ ಕೂಲಿಗಾಗಿ ತೆರಳುವ ಕಟ್ಟಡ ಕಾರ್ಮಿಕರಿಗೆ ಈ ಯೋಜನೆ ಲಾಭಕಾರಿಯಾಗಿದ್ದು, ಪ್ರತಿ ನಿತ್ಯ ಅವರು ಕೆಲಸ ನಿರ್ವಹಣೆಗೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳಲು ಕನಿಷ್ಠ 150 ರಿಂದ 200 ರೂ. ವ್ಯಯಿಸಬೇಕಾದ ಪರಿಸ್ಥಿತಿ ಇದೆ, ಇದರಿಂದ ಅವರು ಪಡೆಯುವ ಕೂಲಿ ಮೊತ್ತದ ಬಹುಭಾಗವನ್ನು ಸಾರಿಗೆಗೆ ವ್ಯಯಿಸುತ್ತಿದ್ದರು. ಇದನ್ನು ಮನಗಂಡ ಸಚಿವ ಶಿವರಾಂ ಹೆಬ್ಬಾರ್, ಕಟ್ಟಡ ಕಾರ್ಮಿಕರ ಅನುಕೂಲಕ್ಕಾಗಿ ಉಚಿತ ಸಾರಿಗೆ ವ್ಯವಸ್ಥೆಯ ಯೋಜನೆಗೆ ಚಾಲನೆ ನೀಡಿದರು.ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಬಸ್ ಸೇವೆ ಜಾರಿಗೆ ಕಾರ್ಮಿಕ ಇಲಾಖೆ ಮುಂದಡಿ ಇರಿಸಿತ್ತು. ಈ ಸಂದರ್ಭದಲ್ಲಿ ಇಲಾಖೆಯು ಶೇ.80ರಷ್ಟನ್ನು ತಾನು ಭರಿಸುವ ಭರವಸೆ ನೀಡಿತ್ತಲ್ಲದೆ, ಇನ್ನುಳಿದ ಶೇ.20ರಷ್ಟನ್ನು ರಿಯಾಯ್ತಿ ನೀಡುವುದು ಅಥವಾ ಸಾರಿಗೆ ಇಲಾಖೆಯೇ ಭರಿಸುವ ಪ್ರಸ್ತಾವನೆಯನ್ನು ಇರಿಸಿತ್ತು. ಆರಂಭಿಕ ಹಂತದಲ್ಲಿ ಈ ಪ್ರಸ್ತಾವನೆಗೆ ಮೌಖಿಕ ಸಮ್ಮತಿ ಸೂಚಿಸಿದ್ದ ಸಾರಿಗೆ ಇಲಾಖೆ ಇದೀಗ 'ತನ್ನ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಶೇ.20 ರಿಯಾಯ್ತಿ ಅಥವಾ ತಾನು ಭರಿಸುವುದು ಅಸಾಧ್ಯ' ಎಂದು ತಿಳಿಸಿದೆ. ಹೀಗಾಗಿ ಶ್ರಮಿಕ ವರ್ಗದ ಏಳಿಗೆಯ ಏಕಮೇವ ಉದ್ದೇಶದಿಂದ ಜಾರಿ ಮಾಡಲಾಗುತ್ತಿರುವ ಈ ಯೋಜನೆ ಅನುಷ್ಠಾನದ ಕಡಕ್ ನಿರ್ಧಾರ ಕೈಗೊಂಡಿರುವ ಕಾರ್ಮಿಕ ಸಚಿವರು, ಶೇ.100ರಷ್ಟು ಮೊತ್ತವನ್ನು ಪಾವತಿಸಿಯಾದರೂ ರಾಜ್ಯದಾದ್ಯಂತ ಜಾರಿ ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೀಗಾಗಿ ಶೀಘ್ರವೇ ರಾಜ್ಯದಾದ್ಯಂತ ಶ್ರಮಿಕ ವರ್ಗಕ್ಕೆ ಉಚಿತ ಬಸ್ ಪಾಸ್ ನೀಡುವ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ವೇದಿಕೆ ಸಿದ್ಧಗೊಂಡಿದೆ.