ಬೆಂಗಳೂರು: ಜಗತ್ತಿನಾದ್ಯಂತ ಬಿಟ್‌ಕಾಯಿನ್ ಹೂಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಹೀಗೆಯೇ ರಾಜಧಾನಿಯ ಜೆಪಿ ನಗರದ ಉದ್ಯಮಿಯೊಬ್ಬರು ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ ವಂಚಕನನ್ನು ನಂಬಿ ಮೂರುವರೆ ಕೋಟಿ ರೂಪಾಯಿ ಉಂಡೆ ನಾಮ ಹಾಕಿಸಿಕೊಂಡಿದ್ದಾರೆ.
ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ ಹೂಡಿಕೆ ಮಾಡಲು ಸಹಾಯಮಾಡುವುದಾಗಿ ಭರವಸೆ ನೀಡಿ ಖದೀಮ ವಂಚಿಸಿದ್ದಾನೆ ಎಂದು ದೂರು ನೀಡಲಾಗಿದೆ.
ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದ ಸ್ನೇಹಿತ ರಮೇಶ್ ಲಾಭ ಗಳಿಸಿದ್ದರು ಎಂದು ಉದ್ಯಮಿ ಗೌತಮ್ ತಿಳಿಸಿದ್ದಾರೆ. ಈ ವ್ಯವಹಾರದ ಬಗ್ಗೆ ತಮಗೆ ಸಾಕಷ್ಟು ತಿಳಿವಳಿಕೆ ಇಲ್ಲ ಆದರೆ ಸ್ನೇಹಿತ ಕುನಾಲ್ ಎಂಬಾತನ ಮೂಲಕ ಹೂಡಿಕೆ ಮಾಡಿದ್ದು ಎಂದು ರಮೇಶ್ ಹೇಳಿದ್ದರು.
ರಮೇಶ್ ಸಂಪರ್ಕದಿಂದ ಕುನಾಲ್ ಭೇಟಿ ಮಾಡಿದ ಗೌತಮ್, ಸಲಹೆಯಂತೆ ಕಳೆದ ಮೇ 15ರಂದು ಕ್ರಿಪ್ಟೋಕರೆನ್ಸಿಗಳನ್ನು ಖರೀದಿಸಲು ಎರಡು ಬ್ಯಾಂಕ್ ಖಾತೆಗಳಿಗೆ ಒಟ್ಟು 3.5 ಕೋಟಿ ರೂ ವರ್ಗಾವಣೆ ಮಾಡಿದ್ದಾರೆ ಆದರೆ ಕ್ರಿಪ್ಟೋಕರೆನ್ಸಿ ವ್ಯವಸ್ಥೆ ಮಾಡಲಿಲ್ಲ. ತನಗೆ ನೀಡಿದ್ದ ಹಣವನ್ನೂ ವಾಪಸ್ ನೀಡಲಿಲ್ಲ. ಸಂಪರ್ಕಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಕಂಗಾಲಾದ ಗೌತಮ್ ದಕ್ಷಿಣ ವಿಭಾಗದ ಸಿ.ಇ.ಎನ್ ಅಪರಾಧ ಪೊಲೀಸರಿಗೆ ದೂರು ದಾಖಲಾಗಿದ್ದು ಮುಂದಿನ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.