ಮಹಾರಾಷ್ಟ್ರದ ಘಟ್ಟ ಪ್ರದೇಶದ ಮತ್ತು ಕರ್ನಾಟಕದ ವಿವಿಧೆಡೆ ಮಳೆ ಮುಂದುವರಿದಿದ್ದು, ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಹಲವು ಕೆರೆಗಳು ಮತ್ತೆ ಕೋಡಿ ಹರಿಯುತ್ತಿದ್ದು, ರಸ್ತೆಗಳ ಮೇಲೆ ನೀರು ಬಂದಿರುವುದರಿಂದ ಸಂಚಾರ ಸ್ಥಗಿತಗೊಂಡಿದೆ. ಸತತ ಮಳೆಯಿಂದ ಜನಜೀವನ ಹೈರಾಣಾಗಿದೆ. ಮಹಾರಾಷ್ಟ್ರದ ವೀರ, ಉಜನಿ ಜಲಾಶಯಗಳಿಂದ ಭೀಮಾನದಿಗೆ 1.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನದಿ ನೀರಿನಲ್ಲಿ ಗಾಣಗಾಪುರ ಹಾಗೂ ಘತ್ತರಗಿ ಸೇತುವೆಗಳು ಜಲಾವೃತಗೊಂಡಿವೆ. ಅಫಜಲಪುರ ಹಾಗೂ ವಿಜಯಪುರ ಮಾರ್ಗದ ಸಂಪರ್ಕ ಕಡಿತಗೊಂಡಿದೆ. ವಾಹನ ಸವಾರರು ಪರದಾಡುತ್ತಿದ್ದಾರೆ. ನದಿ ಪ್ರವಾಹದಿಂದ ಅಫಜಲಪುರ ತಾಲೂಕು ಮಣ್ಣೂರಿನ ಯಲ್ಲಮ್ಮ ದೇಗುಲ ಜಲಾವೃತಗೊಂಡಿದೆ. ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯೂ ಮುಳುಗಿದೆ.