ಬಾಗಲಕೋಟೆಯ ಮುಧೋಳ ತಾಲೂಕಿನ ಕೆಲ ಗ್ರಾಮಗಳು ಪ್ರವಾಹದ ಭೀತಿಯನ್ನು ಎದುರಿಸುತ್ತಿದೆ. ಸೋರಗಾಂವ-ಜಾಲಿಬೇಲಿ ಸೇತುವೆ, ಮುಧೋಳ-ಯಾದವಾಡ ಸೇತುವೆ, ಮಾಚಕನೂರು ಸೇತುವೆ ಮುಳುಗಡೆಯಾಗಿದೆ. ನದಿ ಪಾತ್ರದ ಹೊಲದಲ್ಲಿನ ರೈತ ಮನೆಗಳು ಜಲಾವೃತವಾಗಿದೆ. ಮನೆ ತೊರೆದು ಸುರಕ್ಷಿತ ಸ್ಥಳದತ್ತ ರೈತರು ಮುಖ ಮಾಡಿದ್ದಾರೆ. ಜಾಲಿಬೇರಿ- ಸೋರಗಾಂವ ಹೊಲದಲ್ಲಿ ವಾಸವಿದ್ದ ರೈತರ ಮನೆಗಳು ಜಲಾವೃತವಾಗಿದ್ದು, ಹೆಸರು, ಸೋಯಾಬಿನ್, ಮೆಕ್ಕೆಜೋಳ, ಕಬ್ಬು ಬೆಳೆಗಳು ಜಲಾವೃತವಾಗಿದೆ. ನದಿ ತೀರದ ರೈತ ಕುಟುಂಬಗಳಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ.