ತಮ್ಮನೊಬ್ಬ ತನ್ನ ಸಹೋದರನ ಬೈಕ್ ಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಕುಟುಂಬ ಕಲಹ ಹಾಗೂ ಆಸ್ತಿ ವಿಚಾರಕ್ಕಾಗಿ ಉಂಟಾದ ಜಗಳದಲ್ಲಿ ಆಕ್ರೋಶಗೊಂಡ ತಮ್ಮನೊಬ್ಬ ಅಣ್ಣನ ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳಿಗೆ ಬೆಂಕಿ ಹಚ್ಚಿದ್ದಾನೆ. ಬೆಂಗಳೂರಿನ ಕೆ.ಪಿ.ಅಗ್ರಹಾರ 2ನೇ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ.
ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ಗಳಿಗೆ ಚಂದ್ರು ಬೆಂಕಿ ಇಟ್ಟಿದ್ದು ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅಣ್ಣ ಭೂಪಾಲ್ ದೂರು ನೀಡಿದ್ದಾರೆ.
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅಣ್ಣನ ಮೇಲಿನ ಸಿಟ್ಟಿಗೆ ಚಂದ್ರು, ಬೈಕ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅದನ್ನು ಪೊಲೀಸರಿಗೆ ನೀಡಿದ್ದಾರೆ.
ಭೂಪಾಲ್ ಅವರ ತಂದೆ ದಿ.ಸುಬ್ರಮಣ್ಯ ಹೆಸರಿನಲ್ಲಿ ಮಾಗಡಿ ರಸ್ತೆಯಲ್ಲಿ ಮನೆ ಇದೆ. ಇದನ್ನು ತಾನೇ ಇಟ್ಟುಕೊಂಡ ಆರೋಪ ಚಂದ್ರು ಮೇಲಿತ್ತು. ಆಸ್ತಿ ವಿಚಾರಕ್ಕಾಗಿ ಅಣ್ಣ-ತಮ್ಮಂದಿರು ಕೋರ್ಟ್ ಮೆಟ್ಟಿಲೇರಿದ್ದರು. ಕುಟುಂಬದ ಜೊತೆ ಅದೇ ಬಡಾವಣೆಯಲ್ಲಿ ಭೂಪಾಲ್ ವಾಸವಾಗಿದ್ದ.
ರಾತ್ರಿ ಏಕಾಏಕಿ ಅಣ್ಣನ ಬಾಡಿಗೆ ಮನೆ ಮುಂದಿದ್ದ ನಾಲ್ಕು ಬೈಕ್ಗಳಿಗೆ ಪೆಟ್ರೋಲ್ ಎರಚಿ ಕಡ್ಡಿಗಿರಿ ಬೆಂಕಿ ಹಚ್ಚಿದ್ದಾನೆ. ಭೂಪಾಲ್ ಅವರ ಅಳಿಯ ಹಾಗೂ ವಾಸವಿದ್ದ ಕಟ್ಟಡದ ಮಾಲೀಕನ ಬೈಕ್ಗಳು ಸಹ ಬೆಂಕಿಗೆ ಆಹುತಿಯಾಗಿವೆ.