ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಶುಲ್ಕ ಈ ಬಾರಿ ದುಬಾರಿಯಾಗಲಿದೆ.
ರಾಜ್ಯದಲ್ಲಿನ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಶುಲ್ಕವನ್ನು 2019-20ನೇ ಸಾಲಿಗೆ ಶೇ. 10ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ.
ಕಾಮೆಡ್ಕೆ ಸೇರಿದಂತೆ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳೊಂದಿಗೆ ಶುಲ್ಕ ನಿಗದಿ ಕುರಿತಂತೆ ಸಭೆ ನಡೆಸಿದ ನಂತರ ಈ ವಿಷಯ ತಿಳಿಸಿದರು.
ಈ ಬಾರಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶೇ. 25ರಷ್ಟು ಪ್ರವೇಶ ಶುಲ್ಕ ಏರಿಕೆಗೆ ಒತ್ತಾಯ ಮಾಡಿದ್ದವು. ಈ ಬೇಡಿಕೆಯನ್ನು ಬದಿಗೊತ್ತಿ ಶೇ. 10ರಷ್ಟು ಪ್ರವೇಶ ಶುಲ್ಕ ಏರಿಕೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ ನಂತರ ಇಂಜಿನಿಯರಿಂಗ್ ಪ್ರವೇಶ ಶುಲ್ಕವನ್ನು ಶೇ. 10ರಷ್ಟು ಏರಿಕೆಗೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.
2019-20ನೇ ಸಾಲಿಗೆ ಮೊದಲ ಸ್ಲ್ಯಾಬ್ನಲ್ಲಿ 58,800 ರೂ., 2ನೇ ಸ್ಲ್ಯಾಬ್ನಲ್ಲಿ 65,340 ರೂ. ಶುಲ್ಕ ನಿಗದಿ ಮಾಡಲಾಗಿದೆ. ಕಾಮೆಡ್ಕೆ ವ್ಯಾಪ್ತಿಗೊಳಪಡುವ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ 2019-20ನೇ ಸಾಲಿಗೆ ಪ್ರವೇಶ ಶುಲ್ಕ ಮೊದಲ ಸ್ಲ್ಯಾಬ್ನಲ್ಲಿ 1,43,748 ರೂ.ಗಳಾಗಿದ್ದರೆ, 2ನೇ ಸ್ಲ್ಯಾಬ್ನಲ್ಲಿ 2,1,960 ರೂ.ಗಳಾಗಿರುತ್ತದೆ ಎಂದು ಸಚಿವರು ವಿವರ ನೀಡಿದ್ದಾರೆ.