ಲಾಕ್ ಡೌನ್ ಪರಿಣಾಮ ಪ್ರಸಿದ್ಧ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಗುಡಿಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.
ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ರಾಜಸ್ತಾನದ ವಲಸೆ ಕಾರ್ಮಿಕರು ತಂಗಿರುವ ಕಲಬುರಗಿ ಜಿಲ್ಲೆಯ ಅಫಜಲಪೂರ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದ ಕಾರ್ಮಿಕರ ನಿರಾಶ್ರಿತರ ಕೇಂದ್ರಕ್ಕೆ ಜಿಲ್ಲಾ ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕರ ನೋಡಲ್ ಅಧಿಕಾರಿ ಶ್ರೀಹರಿ ದೇಶಪಾಂಡೆ ಭೇಡಿ ನೀಡಿ ಕಾರ್ಮಿಕರ ಸಮಸ್ಯೆ ಆಲಿಸಿದರು.
ತದನಂತರ ಧಾರ್ಮಿಕ ಸ್ಥಾನವಾದ ಗಾಣಗಾಪೂರದ ದತ್ತಾತ್ರೇಯ ದೇವಸ್ಥಾನಕ್ಕೂ ಭೇಟಿ ನೀಡಿ ಅಲ್ಲಿ ಸಾಮಾಜಿಕ ಅಂತರ ಕಾಪಾಡುವುದರ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.
ಶ್ರೀ ದತ್ತಾತ್ರೇಯನ ದರ್ಶನಕ್ಕೆ ಬಂದು ಲಾಕ್ ಡೌನ್ ಪರಿಣಾಮ ಇಲ್ಲಿಯೆ ಉಳಿದಿರುವ ಮಹಾರಾಷ್ಟ್ರದ ಯಾವತಮಾಳ ಗ್ರಾಮದ 6 ಸದಸ್ಯರ ಕುಟುಂಬವನ್ನು ಭೇಟಿ ಮಾಡಿದ ಶ್ರೀಹರಿ ದೇಶಪಾಂಡೆ, ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್ ನೀಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಲುವಂತೆ ತಿಳಿಸಿದರು.
ಭಕ್ತಾಧಿಗಳು ತಮ್ಮ ಊರಿಗೆ ಹೋಗಲು ವ್ಯವಸ್ಥೆ ಮಾಡುವಂತೆ ಕೇಳಿಕೊಂಡರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಯಾಣ ಸಾಧ್ಯವಿಲ್ಲ. ತಮಗೆ ಬೇಕಾದ ಎಲ್ಲಾ ಅವಶ್ಯಕ ವಸ್ತುಗಳ ಪೂರೈಸಲಾಗುವುದು ಎಂದು ಅಧಿಕಾರಿಗಳು ಅವರಿಗೆ ಮನವರಿಕೆ ಮಾಡಿದರು.