ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮ ಮಾಡುವ ಯೋಜನೆಯಲ್ಲಿ ಹೆಸ್ಕಾಂ ಅಧಿಕಾರಿಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ರೈತರಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಬೇಕು. ಅರ್ಜಿ ಪ್ರತಿಗೆ 55 ರೂಪಾಯಿ ದರ ಇಲಾಖೆ ನಿಗದಿ ಮಾಡಿದೆ. ಆದರೆ ಆ ಅರ್ಜಿಗೆ 700 ರಿಂದ 4 ಸಾವಿರ ವರೆಗೆ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ.
ಏಜೆಂಟರ ಮೂಲಕ ಹಣ ಸುಲಿಗೆ ಮಾಡುತ್ತಿರುವ ಸಿಂದಗಿ ಹೆಸ್ಕಾಂ ಎಇಇ ಚಂದ್ರಕಾಂತ ನಾಯಕ್ ಹಾಗೂ ಅಧಿಕಾರಿ ಸಪ್ನಾ ಪಾಟೀಲ್ ರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಂದಗಿ ತಾಲೂಕಿನ ನದಿ-ಕೆನಲ್ ಹಾಗೂ ಬಾವಿಗಳಿಂದ ಆರ್.ಆರ್ ನಂಬರ್ ಇಲ್ಲದೇ ಸಾವಿರಾರು ರೈತರು ಅಕ್ರಮ ಪಂಪ್ ಸೆಟ್ ಬಳಿಕೆ ಮಾಡ್ತಿದ್ರು. ಅಕ್ರಮ ಪಂಪ್ ಸೆಟ್ ಗೆ ಸಕ್ರಮ ಗೊಳಿಸಲು ಸರ್ಕಾರ 30-11-2018 ರವರೆಗೆ ರೈತರಿಗೆ ಅವಕಾಶ ನೀಡಿದೆ. ಇದೀಗ 55 ರೂಪಾಯಿ ಅರ್ಜಿಗೆ 4 ಸಾವಿರವರೆಗೆ ಹಣವನ್ನು ಅಧಿಕಾರಿಗಳು ಸುಲಿಗೆ ಮಾಡುತ್ತಿದ್ದಾರೆ. ಏಜೆಂಟ್ ಮೂಲಕ ರೈತರಿಂದ ಹಣ ಸುಲಿಗೆ ಮಾಡ್ತಿರೊ ವಿಡಿಯೋವನ್ನು ರೈತರು ಮಾಡಿದ್ದಾರೆ.
ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಗೊಂಡ ರೈತರು, ಹೆಸ್ಕಾಂ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.