ಜಮ್ಮು ಕಾಶ್ಮೀರದಲ್ಲಿ ಉಗ್ರರ ಜೊತೆ ಹೋರಾಡಿ ವೀರ ಮರಣ ಹೊಂದಿದ ವೀರಯೋಧ ಪ್ರಕಾಶ ಜಾಧವ ಮಣ್ಣಲ್ಲಿ ಮಣ್ಣಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೂಧಿಹಾಳ ಗ್ರಾಮದಲ್ಲಿ ವೀರ ಯೋಧನ ಅಂತ್ಯಕ್ರಿಯೆ ಸಕಲ ಸರ್ಕಾರಿ ಹಾಗೂ ಸೇನಾ ಗೌರವದೊಂದಿಗೆ ನೆರವೇರಿತು.
ಯೋಧ ಪ್ರಕಾಶ ಸಾವಿನಿಂದಾಗಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮದಲ್ಲಿ ಯೋಧನ ಪಾರ್ಥಿವ ಶರಿರದ ಮೆರವಣಿಗೆ ನಡೆಸಲಾಯಿತು. ಯೋಧನ ಅಂತ್ಯಕ್ರಿಯೆಗೆ ಸುತ್ತಲು ಹತ್ತಾರು ಗ್ರಾಮದ ಜನ ಸಾಗರವೇ ಹರಿದು ಬಂದಿದ್ದು ಅಮರ ರಹೆ, ಅಮರ ರಹೆ, ಪ್ರಕಾಶ ಜಾಧವ್ ಅಮರ ರಹೆ ,ಎಂಬ ಘೋಷ ವಾಕ್ಯದೊಡನೆ ಭಾವನಾತ್ಮಕ ವಿದಾಯ ಹೇಳಿದರು.
ಹುತಾತ್ಮ ಯೋಧ ಪ್ರಕಾಶ ಜಾಧವ ತಂದೆ ತಾಯಿ ಪತ್ನಿ ಹಾಗೂ ಮೂರು ತಿಂಗಳ ಹೆಣ್ಣು ಮಗುವನ್ನ ಅಗಲಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಯೋಧನ ಅಂತ್ಯ ಸಂಸ್ಕಾರಲ್ಲಿ 10 ಸಾವಿರಕ್ಕಿಂತಲೂ ಹೆಚ್ಚಿನ ಜನ ಭಾಗಿಯಾಗಿದ್ದರು. ಅಲ್ಲದೆ ಜನಪ್ರತಿನಿಧಿಗಳಾದ ಸಂಸದ ಪ್ರಕಾರ ಹುಕ್ಕೇರಿ, ಶಾಸಕಿ ಶಶಿಕಲಾ ಜೊಲ್ಲೆ, ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.