ಕಾರವಾರ : ಉತ್ತರ ಕನ್ನಡ ಜನರ ಬಹು ಕಾಲದ ಬೇಡಿಕೆ ಆಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕನಸು ಕೊನೆಗೂ ಈಡೇರಿದ್ದು, ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ತಾತ್ವಿಕವಾಗಿ ಒಪ್ಪಿಗೆ ಕೊಟ್ಟಿದೆ.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ವಿಚಾರವಾಗಿ ಉತ್ತರ ಕನ್ನಡ ಶಾಸಕರ ಜೊತೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸಭೆ ನಡೆಸಿದ್ದಾರೆ. ನಂತರ ಮಾತನಾಡಿದ ಸಚಿವರು, ಕುಮಟಾ ಭೌಗೋಳಿಕವಾಗಿ ಉತ್ತರ ಕನ್ನಡ ಜಿಲ್ಲೆಯ ಮಧ್ಯ ಭಾಗದಲ್ಲಿ ಇದೆ.
ಇದರಿಂದಾಗಿ ಕುಮಟಾದಲ್ಲಿ ಆಸ್ಪತ್ರೆ ಮಾಡಲು ಸಲಹೆ ಬಂದಿದೆ. ಈ ಹಿನ್ನೆಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ತಾತ್ವಿಕವಾಗಿ ಒಪ್ಪಿಗೆ ನೀಡಲಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಹೇಳಿದರು.
ವಿಧಾನಮಂಡಲ ಅಧಿವೇಶನ ಬಳಿಕ ಒಂದು ದಿನ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಗುರುತಿಸಿರುವ ಜಾಗಗಳ ವೀಕ್ಷಣೆ ಮಾಡಲಾಗುವುದು ಅಲ್ಲದೆ, ಕಾರವಾರ ವೈದ್ಯಕೀಯ ಕಾಲೇಜು ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಸೌಲಭ್ಯ ಒದಗಿಸುವ ಬಗ್ಗೆ ಖುದ್ದು ಪರಿಶೀಲನೆ ಮಾಡಲು ತೀರ್ಮಾನಿಸಿರುವುದಾಗಿ ಸಚಿವರು ಹೇಳಿದರು.