ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಕಾಂಗ್ರೆಸ್ ನಾಯಕರು ಕಳೆದ ಐದು ದಿನಗಳಿಂದ ಆರಂಭಿಸಿದ್ದ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
ರಾಮನಗರದಿಂದ ಇಂದು ಬೆಳಗ್ಗೆ 8.30ರಿಂದ ಪಾದಯಾತ್ರೆ ಆರಂಭವಾಗಬೇಕಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್‍ನ ಸೂಚನೆ, ಪೊಲೀಸರ ಅಡ್ಡಿ, ನ್ಯಾಯಾಲಯದ ವಿಚಾರಣೆ, ಹಲವು ಅನುಮತಿಗಳು ರದ್ದುಗೊಂಡಿದ್ದರಿಂದ ಪಾದಯಾತ್ರೆ ಹಿಂದೆ ತೆಗೆದುಕೊಳ್ಳಲಾಗಿದೆ.
ಇದಕ್ಕೂ ಮುನ್ನಾ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ದ್ರವನಾರಾಯಣ್, ಮುಖಂಡರಾದ ರಮೇಶ್ ಕುಮಾರ್, ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಚಲುವರಾಯಸ್ವಾಮಿ ಮತ್ತಿತರ ನೇತೃತ್ವದಲ್ಲಿ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದೀರ್ಘ ಸಮಾಲೋಚನೆ ನಡೆಯಿತು. ಸಭೆಯಲ್ಲಿ ಪರಿಸ್ಥಿತಿಯ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳು ಕೇಳಿ ಬಂದವು. ಆದರೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ಮೊಟಕುಗೊಳಿಸುವುದು ಸೂಕ್ತ, ಮೂರನೆ ಅಲೆ ತಗ್ಗಿದ ಬಳಿಕ ಮತ್ತೆ ರಾಮನಗರದಿಂದಲೇ
ನೀರಿಗಾಗಿ ನಡಿಗೆ ಆರಂಭಿಸಲು ನಿರ್ಧರಿಸಲಾಗಿದೆ.