ಬೆಂಗಳೂರು: ಹಿಜಾಬ್ ವಿವಾದದಿಂದ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಇದು ಆಗಬಾರದು ಎಂದು ಕಾಂಗ್ರೆಸ್ ವಿಧಾನ ಸಭಾ ಕಲಾಪದಲ್ಲಿ ಕಪ್ಪು ಪಟ್ಟಿ ಪ್ರದರ್ಶಿಸಿ ಮೌನ ಪ್ರತಿಭಟನೆ ಮಾಡಿ ಗಮನ ಸೆಳೆಯಿತು.
ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರು ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಆರಂಭಿಸುವ ಮುನ್ನವೇ ಕಾಂಗ್ರೆಸ್ ಸದಸ್ಯರು ತಮ್ಮ ತೋಳಿಗೆ ಕಪ್ಪುಪಟ್ಟಿ ಧರಿಸಿ ವಿಧಾನಸಭೆಗೆ ಹಾಜರಾಗಿದ್ದರು. ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಹಿಜಾಬ್ ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದು ಆಗಬಾರದು. ಕೋವಿಡ್‌ನಿಂದ ಈಗಾಗಲೇ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುವ ಪರಿಸ್ಥಿತಿ ಬಂದಿದೆ. ಹಿಜಾಬ್ ವಿವಾದ ಮತ್ತಷ್ಟು ಸಮಸ್ಯೆ ತರಬಾರದು ಎಂದು ಕಾಂಗ್ರೆಸ್ ವಾದಿಸಿತ್ತು. ಅಲ್ಲದೇ ಇದೊಂದು ಧರ್ಮ ಸೂಕ್ಷ್ಮ ವಿಚಾರವಾದ್ದರಿಂದ ಯಾವ ಕಡೆಗೂ ಸ್ಪಷ್ಟ ನಿಲುವನ್ನು ತೆಗೆದುಕೊಂಡು ವಾದಿಸಲು ಕಾಂಗ್ರೆಸ್ ಮುಂದಾಗಿರಲಿಲ್ಲ. ಇದೀಗ ಕಲಾಪದಲ್ಲಿ ತೋಳಿಗೆ ಕಪ್ಪು ಕಟ್ಟಿ ಕಟ್ಟಿಕೊಂಡು ಮೌನವಾಗಿ ಪ್ರತಿಭಟನೆ ಮಾಡಿದೆ. ಈ ಮೂಲಕ ಕಾಂಗ್ರೆಸ್ ಮೌನಾಸ್ತ್ರವನ್ನು ಪ್ರಯೋಗ ಮಾಡಿದ್ದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಇದಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.