ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದಿರುವ ಆರ್ಥಿಕವಾಗಿರುವ ಸಬಲರಾದ ಅನೇಕರು ಇದೀಗ ಪೇಚಿಗೆ ಸಿಲುಕಿದ್ದಾರೆ, ಕಾರ್ಡ್ ಹಿಂದಿರುಗಿಸಲು ಪರದಾಡುತ್ತಿದ್ದಾರೆ. 15 ದಿನಗಳಲ್ಲಿ ಮೈಸೂರಿನಲ್ಲಿ 50ಕ್ಕೂ ಹೆಚ್ಚು ದಂಡ ಪಾವತಿಸಿ, ಕಾರ್ಡ್ ಅನ್ನು ವಾಪಸ್ ಕಳುಹಿಸಲಾಗಿದೆ.
ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಕೇಂದ್ರ, ರಾಜ್ಯ ಸರ್ಕಾರಗಳು ನೀಡುತ್ತಿರುವ ಬಿಪಿಎಲ್ ಪಡಿತರವನ್ನು ಕೆಲವು ಸದೃಢ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡಿತರ ಪಡೆದು, ಸರ್ಕಾರವನ್ನು ವಂಚಿಸಿರುವುದನ್ನು ಕಂಡುಬಂದಿತ್ತು.
ಆದಾಯ ತೆರಿಗೆ ಪಾವತಿಸುತ್ತಿರುವ, 1000 ಅಡಿ ಅಥವಾ 10 ಚದರ ಅಡಿಗಳಿಗಿಂತ ವಿಸ್ತೀರ್ಣದಲ್ಲಿ ಆಧುನಿಕ ಶೈಲಿಯ ಮನೆ ಹೊಂದಿರುವ ಕೆಲವು ಕುಟುಂಬಗಳು, ಶಿಕ್ಷಣ, ಸಾರಿಗೆ, ವಿದ್ಯುತ್, ರೈಲ್ವೆ, ಪೊಲೀಸ್ ಮೊದಲಾದ ಸರ್ಕಾರಿ ಇಲಾಖೆಗಳಲ್ಲಿ ನೌಕರಿ ಮಾಡುತ್ತಿರುವ ಹಲವರು, ತಮ್ಮ ಕುಟುಂಬದ ಇತರರ ಹೆಸರಿನಲ್ಲಿ ಬಿಪಿಎಲ್ ಪಡಿತರ ಚೀಟಿ ಪಡೆದು ವಂಚಿಸಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು.
ಹೀಗಾಗಿ ಸರ್ಕಾರಿ ನೌಕರರು, ಪಿಂಚಣಿದಾರರು, ತೆರಿಗೆದಾರರು, ಆರ್ಥಿಕ ಸದೃಢರು ಬಿಪಿಎಲ್ ಕಾರ್ಡ್ ಪಡೆದಿದ್ದರೆ, ಅದನ್ನು ಕೂಡಲೇ ಹಿಂದಿರುಗಿಸುವಂತೆ ಆಹಾರ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸೂಚನೆ ನೀಡಿತ್ತು. ದಂಡ ರಹಿತವಾಗಿ ಕಾರ್ಡ್ ವಾಪಸ್ ನೀಡಲು ಸಮಯಾವಕಾಶವನ್ನೂ ನೀಡಲಾಗಿತ್ತು.
ಆದರೆ, ಸಾಕಷ್ಟು ಮಂದಿ ನಿಗದಿತ ಅವಧಿಯೊಳಗೆ ಕಾರ್ಡ್‌ನ್ನು ಹಿಂದಿರುಗಿಸಿರಲಿಲ್ಲ. ಹೀಗಾಗಿ ಅಧಿಕಾರಿಗಳು ಆಧಾರ್ ಲಿಂಕ್ ಮೂಲಕ ಅನರ್ಹರನ್ನು ಪತ್ತೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅದರಲ್ಲಿ ದೊರೆತ ಮಾಹಿತಿ ಆಧರಿಸಿ ಮೈಸೂರು ನಗರ ಹಾಗೂ ಜಿಲ್ಲೆಯ ಸುಮಾರು 5 ಸಾವಿರ ಮಂದಿ ಅನರ್ಹರಿಗೆ ಕಾರ್ಡ್ ವಾಪಸ್ ನೀಡುವಂತೆ ನೋಟಿಸ್ ನೀಡಿದ್ದಾರೆ. ನೋಟಿಸ್ ಪಡೆದವರು ದಂಡದ ಸಮೇತ ಕಾರ್ಡ್‌ನ್ನು ಹಿಂದಿರುಗಿಸಬೇಕಿದೆ.
ಬಿಪಿಎಲ್ ಕಾರ್ಡ್ ಪಡೆದಿರುವ ಸಹಕಾರ ಸಂಘಗಳು, ಸ್ವಾಯತ್ತ ಸಂಸ್ಥೆಗಳು, ಮಂಡಳಿಗಳು, ಬ್ಯಾಂಕ್‌ಗಳು, ಆಸ್ಪತ್ರೆಗಳ ನೌಕರರು, ವಕೀಲರು, ಆಡಿಟರ್‌ಗಳು, ಅನುದಾನಿತ ಶಾಲಾ ಕಾಲೇಜು ನೌಕರರು, ಗುತ್ತಿಗೆದಾರರು, ಮನೆ, ಮಳಿಗೆ ಕಟ್ಟಡಗಳಿಗೆ ಬಾಡಿಗೆ ನೀಡಿ ವರಮಾನ ಪಡೆಯುತ್ತಿರುವವರು, ನಿವೃತ್ತಿ ವೇತನ ಪಡೆಯುತ್ತಿರುವ ಸರ್ಕಾರಿ ನೌಕರರು ಕಾರ್ಡ್ ವಾಪಸ್ ನೀಡಲು ಮುಗಿಬಿದ್ದಿದ್ದಾರೆ.
ಲಕ್ಷ ರೂ. ದಂಡ ಪಾವತಿಸಿದ ಪೊಲೀಸಪ್ಪ!: ಒಂದು ವಾರದ ಹಿಂದೆ ನಡೆದ ಘಟನೆ ಇದು. ನಗರದ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಸರ್ಕಾರಿ ವೇತನ ಪಡೆಯುತ್ತಿದ್ದರೂ, ಬಡವರೆಂದು ದಾಖಲೆಗಳನ್ನು ನೀಡಿ ಹಲವಾರು ವರ್ಷಗಳಿಂದ ಬಿಪಿಎಲ್ ಕಾರ್ಡ್ ಮೂಲಕ ಪಡಿತರ ಪಡೆಯುತ್ತಿದ್ದರು.
ಇದನ್ನು ಪತ್ತೆಹಚ್ಚಿದ ಆಹಾರ ಇಲಾಖೆಯ ಅಧಿಕಾರಿಗಳು ನೋಟಿಸ್ ನೀಡಿದ್ದರು. ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ನೀಡಿದ್ದರು. ತಪ್ಪಿದಲ್ಲಿ ಪೊಲೀಸ್ ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದರು.
ಇದರಿಂದ ಕಂಗಾಲಾದ ಕಾನ್ಸ್‌ಟೇಬಲ್ ಆಹಾರ ಇಲಾಖೆಯ ಕಚೇರಿಗೆ ದೌಡಾಯಿಸಿದ್ದರು. ನಂತರ ಅವರು ಇದುವರೆವಿಗೂ ಪಡೆದುಕೊಂಡಿರುವ ಆಹಾರ ಪದಾರ್ಥಗಳನ್ನು ಲೆಕ್ಕ ಹಾಕಿದ ಅಧಿಕಾರಿಗಳು ಬರೋಬ್ಬರಿ 1.07 ಲಕ್ಷ ರೂ. ದಂಡವನ್ನು ಪಡೆದು, ಕಾರ್ಡ್‌ನ್ನೂ ವಶಕ್ಕೆ ಪಡೆದಿದ್ದಾರೆ.
ಇದಲ್ಲದೇ ತಿಂಗಳಿಗೆ 45 ಸಾವಿರ ರೂ. ವೇತನ ಪಡೆಯುತ್ತಿರುವ ಕಂದಾಯ ಇಲಾಖೆಯ ಮಹಿಳಾ ನೌಕರರೊಬ್ಬರು ಬಿಪಿಎಲ್ ಕಾರ್ಡ್ ಪಡೆದಿದ್ದರು. ಅಧಿಕಾರಿಗಳಿಂದ ನೋಟಿಸ್ ಪಡೆದ ಅವರು ಮಾರನೆಯ ಬೆಳಿಗ್ಗೆಯೇ ಆಹಾರ ಇಲಾಖೆಯ ಕಚೇರಿಗೆ ಬಂದು 17 ಸಾವಿರ ರೂ. ದಂಡ ಪಾವತಿಸಿ, ಕಾರ್ಡ್ ವಾಪಸ್ ನೀಡಿ ನಿಟ್ಟುಸಿರು ಬಿಟ್ಟಿದ್ದಾರೆ.
ಭಯ ಏಕೆ..?
ಕಾರ್ಡ್ ವಾಪಸು ನೀಡುವವರು ಬಿಪಿಎಲ್ ಕಾರ್ಡ್ ಮೂಲಕ ಪದಾರ್ಥ ಪಡೆದುಕೊಳ್ಳುತ್ತಿದ್ದ ದಿನದಿಂದ ಇಲ್ಲಿಯವರೆಗೆ ಎಷ್ಟು ಅಕ್ಕಿ ಪಡೆದಿದ್ದಾರೆ ಎಂದು ಲೆಕ್ಕ ಮಾಡಿ ಕೆಜಿಗೆ 35 ರೂ.ಗಳಂತೆ ದಂಡ ಪಾವತಿಸಬೇಕಾಗುತ್ತದೆ. ಸರ್ಕಾರಿ ನೌಕರರು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅಂತಹವರ ಕೆಲಸಕ್ಕೆ ಕುತ್ತು ಬರಲಿದೆ. ಪಿಂಚಣಿ ಪಡೆಯುತ್ತಿರುವವರು ಕಾರ್ಡ್ ಬಯಸಿದ್ದಲ್ಲಿ ಪಿಂಚಣಿಯನ್ನು ನಿಲ್ಲಿಸದಿದ್ದರೆ. ಇದು ವಂಚಕರಿಗೆ ಮುಳುವಾಗಿ ಪರಿಣಮಿಸಿದೆ.
ಅರ್ಹತೆ ಇಲ್ಲದಿದ್ದರೂ ಬಿಪಿಎಲ್ ಕಾರ್ಡ್ ಪಡೆದಿರುವವರು ತಾವಾಗಿಯೇ ಕಾರ್ಡ್‌ಗಳನ್ನು ವಾಪಸ್ ನೀಡುತ್ತಿದ್ದಾರೆ. ಅಂತಹವರಿಂದ ದಂಡ ಪವತಿಸಿಕೊಳ್ಳಲಾಗುತ್ತಿದೆ. ಸರ್ಕಾರಿ ನೌಕರರು, ಪಿಂಚಣಿ ಪಡೆಯುತ್ತಿರುವವರು ಹಾಗೂ ಆದಷ್ಟು ಶೀಘ್ರವಾಗಿ ಕಾರ್ಡ್ ವಾಪಸ್ ಪಡೆದಿದ್ದಾರೆ. ಅಂತಹವರ ವಿರುದ್ಧ ಪ್ರಕರಣ ದಾಖಲಾಗಿಲ್ಲ. -ರಮಣಿ ಪ್ರಕಾಶ್, ಸಹಾಯಕ ನಿರ್ದೇಶಕರು, ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ.