Publish Date: Wed, 05 Apr 2023 (12:07 IST)
Updated Date: Wed, 05 Apr 2023 (12:09 IST)
ಬೆಂಗಳೂರು : ಕಾಂಗ್ರೆಸ್ನವರು ಕಳ್ಳತನ ಮಾಡಿದ್ದಾರೆ. ಅದಕ್ಕೆ ಐಟಿಗೆ ಭಯ ಬೀಳುತ್ತಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ವಿರುದ್ದ ಸೋಲುವ ಭಯದಲ್ಲಿ ಬಿಜೆಪಿ ಐಟಿ ದಾಳಿ ಮಾಡಿಸಲು ಸಿದ್ಧವಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್ ಸೋಲುವುದು ನಿಶ್ಚಿತ. ನಮಗೆ ಗೆಲ್ಲುವ ವಿಶ್ವಾಸವಿದೆ. ಕಳ್ಳನ ಜೀವ ಉಳ್ಳುಳ್ಳಗೆ ಅಂತಾರಲ್ಲ. ಹಾಗೇ ಕಾಂಗ್ರೆಸ್ ಅವರು ಕಳ್ಳತನ ಮಾಡಿದ್ದಾರೆ. ಅದಕ್ಕೆ ಈ ರೀತಿ ಭಯ ಬೀಳುತ್ತಿದ್ದಾರೆ ಎಂದು ಕಿಡಿಕಾರಿದರು.
ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ಳಬೇಕು. ಚುನಾವಣೆ ಆಯೋಗದ ಅಧೀನದಲ್ಲಿ ಎಲ್ಲವೂ ನಡೆಯುತ್ತವೆ. ಅವರೇ ಎಲ್ಲವೂ ಮಾನಿಟರ್ ಮಾಡುತ್ತಿದ್ದಾರೆ. ಈಗಾಗಲೇ ಅಧಿಕೃತವಾಗಿ ಐಟಿ ಅಧಿಕಾರಿಗಳು ಪ್ರತೀ ಜಿಲ್ಲೆಯಲ್ಲಿ ಇದ್ದಾರೆ.
ಚುನಾವಣಾ ಆಯೋಗ ಕೂಡಾ ದಾಳಿ ಮಾಡುತ್ತಿದೆ. ಎಲ್ಲಾ ಪಕ್ಷಗಳ ವಸ್ತುಗಳನ್ನು ಸೀಜ್ ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಒಂದು ಸ್ವಾಯತ್ತತೆ ಸಂಸ್ಥೆ. ಅದರ ಕೆಲಸ ಅದು ಮಾಡುತ್ತದೆ. ಐಟಿ ದಾಳಿ ಆಗುತ್ತಿರುವುದಕ್ಕೆ ಕಾಂಗ್ರೆಸ್ಗೆ ಭಯ ಶುರುವಾಗಿದೆ ಎಂದರು.