Select Your Language

Notifications

webdunia
webdunia
webdunia
webdunia

ರೇಟ್ ಫಿಕ್ಸ್ ಆಗದೆ ಡೇಟ್ ಫಿಕ್ಸ್ ಆಗಲಿಲ್ಲ ಎಂಬ ಆರೋಪಕ್ಕೆ ಕಾಂಗ್ರೆಸ್ ನಾಯಕರೇ ಸಾಕ್ಷಿ: ವಿಜಯೇಂದ್ರ

BY Vijayendra
ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯು ರಾಜ್ಯದ ಅಭಿವೃದ್ಧಿ, ಜನಹಿತ ಅಥವಾ ಉತ್ತಮ ಆಡಳಿತದ ಉದ್ದೇಶದಿಂದ ನಡೆದಿಲ್ಲ. ಅಧಿಕಾರದ ಹಂಚಿಕೆ, ಹಣಬಲ, ಗುಂಪುಗಾರಿಕೆ ಹಾಗೂ ಹೈಕಮಾಂಡ್ ರಾಜಕಾರಣದ ಫಲವಾಗಿ ಸಚಿವ ಸಂಪುಟ ವಿಸ್ತರಣೆ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದರು.
 
ಸಚಿವ ಸಂಪುಟ ವಿಸ್ತರಣೆ ಕುರಿತು ತಾವು ಆರಂಭದಿಂದಲೂ "ರೇಟ್ ಫಿಕ್ಸ್ ಆಗದೆ ಡೇಟ್ ಫಿಕ್ಸ್ ಆಗಲಿಲ್ಲ" ಎಂದು ಹೇಳಿದ್ದೆ. ಇಂದು ಕಾಂಗ್ರೆಸ್‌ನ ಹಿರಿಯ ನಾಯಕರು, ಮಾಜಿ ಸಚಿವರು ಮತ್ತು ಶಾಸಕರು ನೀಡಿರುವ ಬಹಿರಂಗ ಹೇಳಿಕೆಗಳೇ ತಮ್ಮ ಆರೋಪಕ್ಕೆ ಪುಷ್ಟಿ ನೀಡಿವೆ. ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನವೇ ಸಚಿವ ಸಂಪುಟ ರಚನೆಯ ಹಿಂದಿನ ವಾಸ್ತವವನ್ನು ಬಯಲಿಗೆಳೆಯುತ್ತಿದೆ ಎಂದು ಹೇಳಿದರು.
 
ಹಿರಿಯ ಶಾಸಕ ತನ್ವೀರ್ ಸೇಠ್ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೂ ಸಚಿವ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು "ನಾನು ಕಾಂಗ್ರೆಸಿಗ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ಹಣ ನೀಡಲು ಸಾಧ್ಯವಾಗದ ಕಾರಣ ಸಚಿವ ಸ್ಥಾನ ಸಿಗಲಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದು, ಮಾಜಿ ಸಚಿವ ಎಂ.ಸಿ. ಸುಧಾಕರ್ ಹಾಗೂ ಎಸ್.ಎನ್. ನಾರಾಯಣಸ್ವಾಮಿ ಸೇರಿದಂತೆ ಹಲವು ನಾಯಕರು ವ್ಯಕ್ತಪಡಿಸಿರುವ ಅಸಮಾಧಾನ ಕಾಂಗ್ರೆಸ್‌ನ ಆಂತರಿಕ ಸ್ಥಿತಿಯನ್ನು ಬಯಲಿಗೆ ತಂದಿದೆ ಎಂದು ಹೇಳಿದರು.
 
ಮಾಜಿ ಸಚಿವ ತಿಮ್ಮಾಪುರ್ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಹಣ ನೀಡಿದವರಿಗೆ ಹಾಗೂ ಪ್ರಭಾವ ಹೊಂದಿದವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ ಎಂದು ಬಹಿರಂಗವಾಗಿ ಆರೋಪಿಸಿದ್ದಾರೆ. ಇಂತಹ ಗಂಭೀರ ಆರೋಪದ ಕುರಿತು ಕಾಂಗ್ರೆಸ್ ನಾಯಕರು ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.
 
ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್ ಸರ್ಕಾರ, ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಅವಕಾಶ ನೀಡಿಲ್ಲ. ಕೊನೆಯ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಕೈಬಿಡುವ ಮೂಲಕ ಮಹಿಳೆಯರ ಬಗ್ಗೆ ತನ್ನ ನಿಜವಾದ ಮನೋಭಾವವನ್ನು ಕಾಂಗ್ರೆಸ್ ಪ್ರದರ್ಶಿಸಿದೆ ಎಂದು ಟೀಕಿಸಿದರು.
 
ಈ ಸಚಿವ ಸಂಪುಟ ವಿಸ್ತರಣೆ ರಾಜ್ಯದ ಹಿತದೃಷ್ಟಿಯಿಂದ ನಡೆದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರದ ಪೈಪೋಟಿ ಮತ್ತು ಹೈಕಮಾಂಡ್‌ನ ರಾಜಕೀಯ ಸಮೀಕರಣಗಳೇ ಸಚಿವ ಸಂಪುಟ ವಿಸ್ತರಣೆಯ ಹಿಂದಿನ ಪ್ರಮುಖ ಕಾರಣಗಳಾಗಿವೆ ಎಂದು ಆರೋಪಿಸಿದರು.
 
ಸಚಿವರ ಆಯ್ಕೆ ಮಾತ್ರವಲ್ಲ, ಯಾರಿಗೆ ಯಾವ ಖಾತೆ ನೀಡಬೇಕು ಎಂಬುದನ್ನೂ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿಗಳು ಮತ್ತೆ ಮತ್ತೆ ದೆಹಲಿಗೆ ತೆರಳಿ ಅನುಮೋದನೆ ಪಡೆಯಬೇಕಾದ ಪರಿಸ್ಥಿತಿ ರಾಜ್ಯದ ರಾಜಕೀಯ ಇತಿಹಾಸದಲ್ಲೇ ಅಪರೂಪವಾಗಿದೆ ಎಂದು ಹೇಳಿದರು.
 
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವ ಹಾಗೂ ನ್ಯಾಯಾಂಗ ಪ್ರಕ್ರಿಯೆ ಎದುರಿಸುತ್ತಿರುವ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿರುವುದನ್ನು ವಿಜಯೇಂದ್ರ ಪ್ರಶ್ನಿಸಿದರು. ಭ್ರಷ್ಟಾಚಾರ ರಹಿತ ಆಡಳಿತದ ಬಗ್ಗೆ ಮಾತನಾಡುವ ಕಾಂಗ್ರೆಸ್ ತನ್ನದೇ ನೈತಿಕತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು.
 
ಸಚಿವ ಸ್ಥಾನ ನೀಡದಿದ್ದರೆ ಕಾಂಗ್ರೆಸ್ ಹೈಕಮಾಂಡ್‌ಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ನಾಗೇಂದ್ರ ಅವರು ಬೆದರಿಕೆ ಹಾಕಿದ ಬಳಿಕವೇ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಕುರಿತು ಕಾಂಗ್ರೆಸ್ ನಾಯಕರು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
 
ವಿಧಾನಸಭೆಯ ಸ್ಪೀಕರ್, ಉಪಸಭಾಧ್ಯಕ್ಷರು, ವಿಧಾನ ಪರಿಷತ್ತಿನ ಸಭಾಪತಿ ಹಾಗೂ ಉಪಸಭಾಪತಿ ಹುದ್ದೆಗಳ ಕುರಿತು ಎಐಸಿಸಿ ಲೆಟರ್‌ಹೆಡ್‌ನಲ್ಲಿ ನಿರ್ದೇಶನ ನೀಡಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಇಂತಹ ನಡೆ ವಿಧಾನಮಂಡಲದ ಸ್ವಾಯತ್ತತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವಂತದ್ದು ಎಂದು ವಿಜಯೇಂದ್ರ ಹೇಳಿದರು.
 
ಪಿಡಿಒ ನೇಮಕಾತಿ, ಕೃಷಿ ಇಲಾಖೆಯ ಎಒ ಮತ್ತು ಎಎಒ ನೇಮಕಾತಿ ಸೇರಿದಂತೆ ವಿವಿಧ ವಿಷಯಗಳಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಯುವಕರ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಲಘುವಾಗಿ ಮಾತನಾಡಿರುವುದು ಖಂಡನೀಯ. ಸಮಸ್ಯೆ ಬಗೆಹರಿಸುವ ಬದಲು ಪ್ರತಿಭಟನಾಕಾರರನ್ನು ಅಪಹಾಸ್ಯ ಮಾಡುವುದು ಸರ್ಕಾರದ ಅಹಂಕಾರವನ್ನು ತೋರಿಸುತ್ತದೆ ಎಂದು ಹೇಳಿದರು.
 
ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಯಾವುದೇ ಮಹತ್ವದ ಕೊಡುಗೆ ನೀಡಿಲ್ಲ. ಮುಂದಿನ ದಿನಗಳಲ್ಲಿಯೂ ಜನಹಿತಕ್ಕಿಂತ ವೈಯಕ್ತಿಕ ಹಾಗೂ ರಾಜಕೀಯ ಹಿತಾಸಕ್ತಿಗಳೇ ಸರ್ಕಾರದ ಆದ್ಯತೆಯಾಗಿವೆ. ರಾಜ್ಯದ ಜನತೆ ಈ ಸರ್ಕಾರದ ನಿಜಸ್ವರೂಪವನ್ನು ಅರಿತಿದ್ದು, ಸೂಕ್ತ ಸಮಯದಲ್ಲಿ ಪ್ರಜಾಪ್ರಭುತ್ವದ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಭಟನೆ ಏನೋ ಮಾಡ್ತೀರಾ, ರಾಷ್ಟ್ರಧ್ವಜ ಹೇಗೆ ಹಿಡಿಯಬೇಕು ಗೊತ್ತಿಲ್ವಾ: ಮೆಹಬೂಬಾ ಮುಫ್ತಿಗೆ ನೆಟ್ಟಿಗರ ತರಾಟೆ video