ಭಾರತ ಬಂದ್ ಎರಡನೇ ದಿನದ ಮುಷ್ಕರದಿಂದ ವಿಶೇಷವಾಗಿ ಪ್ರಯಾಣಿಕರು ಪರದಾಡುವಂತಾಯಿತು. ಬಂದ್ ಮಾಡಿರುವುದನ್ನೇ ನೆಪ ಮಾಡಿಕೊಂಡಿರುವ ಖಾಸಗಿ ವಾಹನಗಳು ಜನರಿಂದ ಹೆಚ್ಚು ಹಣ ವಸೂಲಿ ದಂಧೆಗೆ ಇಳಿದಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬೇರೆ ಊರುಗಳಿಗೆ ಪ್ರಯಾಣ ಮಾಡಲು ಸಾಧ್ಯವಾಗದ ಪರಿಸ್ಥಿತಿಯಿಂದ ಜನ ಕಕ್ಕಾಬಿಕ್ಕಿಯಾದರು. ಬಿಕೋ ಎನ್ನುವ ಬಸ್ ನಿಲ್ದಾಣದ ಮುಂದೆ ಇಂದು ಸಹ ಕಾದು ಕುಳಿತ ಜನ ಇನ್ನೂ ಸಂಚಾರ ಆರಂಭಗೊಳ್ಳದಿರುವ ಬಗ್ಗೆ ಸುದ್ದಿ ತಿಳಿದು ಖಾಸಗಿ ವಾಹನಗಳ ಪ್ರಯಾಣಕ್ಕೆ ಮುಂದಾದರು.
ಎರಡು ದಿನ ಸಾರಿಗೆ ಸಂಚಾರ ಸ್ಥಗಿತ, ಜೀಪ್ ಮತ್ತಿತರ ಖಾಸಗಿ ವಾಹನ ಚಾಲಕರು ಸಂಕ್ರಾಂತಿಯ ಪೂರ್ವದಲ್ಲಿಯೇ ಸುಗ್ಗಿ ಮಾಡಿದರು. ಸಾಮಾನ್ಯ ಪ್ರಯಾಣ ದರಕ್ಕಿಂತ ಎರಡು, ಮೂರು ಪಟ್ಟು ದರದಲ್ಲಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರು ತಮ್ಮ ಊರು ಮುಟ್ಟಲು ಕಸರತ್ತು ನಡೆಸಿದರು. ಬಸ್ ನಿಲ್ದಾಣ ಮುಂದೆ ನಿನ್ನೆಯಿಂದ ಖಾಸಗಿ ವಾಹನಗಳದ್ದೇ ಕಾರುಬಾರು ತೀವ್ರವಾಗಿದೆ.