ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ(Second PUC) ವಿದ್ಯಾರ್ಥಿ ಶೇ.95ಕ್ಕಿಂತ ಅಧಿಕ ಅಂಕ ಗಳಿಸಿದರೆ ಆ ವಿದ್ಯಾರ್ಥಿ ಹಾಗೂ ಪೋಷಕರಿಗೆ ಅತೀವ ಮೆಚ್ಚುಗೆ ವ್ಯಕ್ತವಾಗುತ್ತದೆ. ಆದರೆ ದೆಹಲಿಯಲ್ಲಿ(Delhi) ಶೇ.95 ಅಂಕ ಗಳಿಸಿದವರಿಗೆ ಮೆಡಿಕಲ್, ಎಂಜಿನಿಯರಿಂಗ್ ಬಿಡಿ, ಸಾಮಾನ್ಯ ಪದವಿ ಕೋರ್ಸಿಗೂ ಪ್ರವೇಶ ಸಿಗುತ್ತಿಲ್ಲ.
ಪ್ರತಿ ವರ್ಷ ದೆಹಲಿಯಲ್ಲಿ(Delhi) ಪದವಿ ಪ್ರವೇಶಕ್ಕೆ ಭಾರಿ ಪೈಪೋಟಿ ಇರುತ್ತದೆ. ಆದರೆ ಈ ವರ್ಷ ಸಿಬಿಎಸ್‌ಇ 12ನೇ ತರಗತಿಯಲ್ಲಿ 70 ಸಾವಿರ ವಿದ್ಯಾರ್ಥಿಗಳು ಶೇ.95ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. ಹೀಗಾಗಿ ಪೈಪೋಟಿ ಇನ್ನೂ ಹೆಚ್ಚಿದೆ.
ದೆಹಲಿ ವಿಶ್ವವಿದ್ಯಾಲಯದ ಜೀಸಸ್ ಅಂಡ್ ಮೇರಿ ಕಾಲೇಜು ಶುಕ್ರವಾರ ಬಿಎ (ಆನರ್ಸ್) ಮನಃಶಾಸ್ತ್ರ ಕೋರ್ಸ್‌ನ ಪ್ರವೇಶಕ್ಕೆ ಮೊದಲ ಕಟಾಫ್ ಅಂಕ ಬಿಡುಗಡೆ ಮಾಡಿದ್ದು, ಶೇ.100ರಷ್ಟುಅಂಕ ಗಳಿಸಿದವರಿಗೆ ಪ್ರವೇಶ ನೀಡುವುದಾಗಿ ತಿಳಿಸಿದೆ. ಹಂಸರಾಜ್ ಕಾಲೇಜಿನಲ್ಲೂ ಕಂಪ್ಯೂಟರ್ಸ್ ಸೈನ್ಸ್ ಆನರ್ಸ್ ಕೋರ್ಸ್ ಪ್ರವೇಶಕ್ಕೆ ಶೇ.100 ಅಂಕ ನಿಗದಿಪಡಿಸಲಾಗಿದೆ. ಇನ್ನು ಶ್ರೀ ಗಂಗಾರಾಮ್ ಕಾಲೇಜಿನಲ್ಲಿ ಕಾಮರ್ಸ್ ಫಾರ್ ಎಕನಾಮಿಕ್ಸ್ ಆನರ್ಸ್ ಮತ್ತ ಬಿಕಾಂ ಆನರ್ಸ್ಗೆ ಶೇ.100ರಷ್ಟು, ಹಿಂದೂ ಕಾಲೇಜ್ ಮತ್ತು ರಾಮ್‌ಜಾಸ್ ಕಾಲೇಜಿನಲ್ಲಿ ಪೊಲಿಟಿಕಲ್ ಸೈನ್ಸ್ ಆನರ್ಸ್ಗೆ, ಹಿಂದೂ ಕಾಲೇಜ್ ಮತ್ತು ಎಸ್‌ಜಿಟಿಬಿ ಖಾಲ್ಸಾ ಕಾಲೇಜಿನಲ್ಲಿ ಬಿಕಾಂಗೆ, ದೀನ್ ದಯಾಲ್ ಕಾಲೇಜಿನಲ್ಲಿ ಕಂಪ್ಯೂಟರ್ಸ್ ಸೈನ್ಸ್ ವಿಷಯಕ್ಕೆ ಶೇ.100ರಷ್ಟುಕಟಾಫ್ ನಿಗದಿ ಮಾಡಲಾಗಿದೆ.
ಏಕೆ ಇಷ್ಟೊಂದು ಕಟಾಫ್?:
ಪ್ರವೇಶಾತಿ ಮಿತಿಗಿಂತ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆಯುವುದನ್ನು ತಪ್ಪಿಸಲು ಈ ರೀತಿ ಕಟಾಫ್ ಅಂಕ ಪ್ರಕಟಿಸಲಾಗುತ್ತದೆ. ಹೆಚ್ಚು ಅಂಕ ಗಳಿಸಿದವರಿಗೆ ಮೊದಲು ಪ್ರವೇಶ ನೀಡಿ, ಬಳಿಕ ಉಳಿಕೆ ಸೀಟುಗಳಿಗೆ ಮತ್ತೊಮ್ಮೆ ಕಟಾಫ್ ಅಂಕ ನಿಗದಿಪಡಿಸಲಾಗುತ್ತದೆ. ಈಗ ಬಿಡುಗಡೆಯಾಗಿರುವುದು ಮೊದಲ ಕಟಾಫ್ ಪಟ್ಟಿ. ಸೀಟುಗಳ ಮಿತಿಗೆ ಅನುಗುಣವಾಗಿ ಮತ್ತಷ್ಟುಕಟಾಫ್ ಪಟ್ಟಿಬಿಡುಗಡೆಯಾಗಲಿವೆ ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ.