ವಿದ್ಯಾರ್ಥಿಯನ್ನು ಅಪಹರಿಸಿಕೊಂಡು ಹೋಗುತ್ತಿದ್ದ ನಾಲ್ವರು ಅಪಹರಣಕಾರರನ್ನು ಕಾರಿನ ಸಮೇತ ಚಿತ್ರದುರ್ಗ ಪೊಲೀಸರ ಸಹಾಯದಿಂದ ಯಲಹಂಕ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡು ವಿದ್ಯಾರ್ಥಿಯನ್ನು ರಕ್ಷಿಸಿದ್ದಾರೆ.
ವಿದ್ಯಾರ್ಥಿ ಅಪಹರಣವಾಗಿರುವ ವರದಿ ದಾಖಲಾದ 3 ಗಂಟೆಯೊಳಗೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಲಬುರಗಿ ಮೂಲದ ರಮೇಶ್ ರಾಥೋಡ್(43), ರಿಜ್ವಾನ್ ಪಟೇಲ್(23), ಇಂದ್ರಜಿತ್ ಪವಾರ್(23) ಮತ್ತು ಹರೀಶ್‍ಕುಮಾರ್(24) ಬಂಧಿತ ಅಪಹರಣಕಾರರು. ಆರೋಪಿಗಳಿಂದ ಇನ್ನೇವಾ ಕಾರು ಹಾಗೂ ಫಾರ್ಚೂನ್ ಕಾರುಗಳನ್ನು ವಶಪಡಿಸಿಕೊಂಡು ವಿದ್ಯಾರ್ಥಿ ಜಗದೀಶ್‍ನನ್ನು ರಕ್ಷಿಸಲಾಗಿದೆ.
ಆಂಧ್ರಪ್ರದೇಶ ಮೂಲದ ಜಗದೀಶ್ ನಗರದ ರೇವಾ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದು, ಬಾಗಲೂರಿನಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದಾನೆ. ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಜಗದೀಶ ಕಾಲೇಜು ಮುಗಿಸಿಕೊಂಡು ರೂಮ್‍ಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ನಾಲ್ವರು ಅಪಹರಣಕಾರರು ಜಗದೀಶನನ್ನು ಅಡ್ಡಗಟ್ಟಿ ಅಪಹರಿಸಿಕೊಂಡು ಹೋಗುತ್ತಿದ್ದರು.
ಈ ಬಗ್ಗೆ ಯಲಹಂಕ ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಕಾರು ಯಾವ ಮಾರ್ಗದಲ್ಲಿ ಹೋಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿದಾಗ ಚಿತ್ರದುರ್ಗ ಕಡೆ ಸಾಗುತ್ತಿರುವುದು ಕಂಡುಬಂದಿದೆ.