ಮೈಸೂರಿನ ಎಚ್.ಡಿ. ಕೋಟೆಯಲ್ಲಿ ಕಾಂಗ್ರೆಸ್ ವತಿಯಿಂದ ಇಂದು ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಸಮಾಜ ಸೆಳೆಯುವ ಕಾರ್ಯವೂ ನಡೆಯಿತು. ಎಚ್.ಡಿ.ಕೋಟೆಯಲ್ಲಿ ಕೆಂಪೇಗೌಡ ಭವನ ನಿರ್ಮಣಕ್ಕೆ 50 ಲಕ್ಷ ಹಣವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಘೋಷಣೆ ಮಾಡಿದರು.
ಭವನ ನಿರ್ಮಾಣಕ್ಕೆ ನೀವು 10 ಲಕ್ಷ ಹಣ ಕೇಳಿದ್ರಿ. ಆದರೆ ಅದು ಇದುವರೆಗೂ ನಿಮಗೆ ಸಿಗಲಿಲ್ಲ. ಆದರೆ ಈಗ 50 ಲಕ್ಷ ರೂಪಾಯಿ ಘೋಷಿಸುತ್ತಿದ್ದೇನೆ. ನಾನು ಕೊಡ್ತಿನೋ ಬೇರೆಯವರ ಕೈಯಲ್ಲಿ ಕೊಡಿಸ್ತಿನೋ ಗೊತ್ತಿಲ್ಲ. ಒಟ್ಟಿನಲ್ಲಿ ಭವನಕ್ಕೆ 50 ಲಕ್ಷ ರೂಪಾಯಿ ಹಣ ಬರುತ್ತೆ ಎಂದು ನುಡಿದರು.
ಎಲ್ಲರೂ ಒಗ್ಗಟ್ಟಾಗಿ, ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಮುಂದೆ ನಡೆಯಿರಿ. ನಾನು ಜಾರಿ ನಿರ್ದೇಶನಾಲಯದಿಂದ ತೊಂದರೆ ಅನುಭವಿಸಿದ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತ ಎಚ್.ಡಿ.ಕೋಟೆ ಜನರಿಗೆ ಧನ್ಯವಾದ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ತಮ್ಮ ಸಹೋದರ ಎಂದು ನುಡಿದರು ಡಿಕೆಶಿ. ಬುದ್ಧ, ಬಸವ ಮನೆಬಿಟ್ಟ ಗಳಿಗೆಯಲ್ಲಿ ನಾನು ಮತ್ತು ಎಚ್ಡಿಕೆ ರಾಜಕೀಯಕ್ಕೆ ಬಂದಿದ್ದೇವೆ. ಕುಮಾರಸ್ವಾಮಿ ನನ್ನ ಸಹೋದರ. ನನ್ನ ಆತ್ಮೀಯ ಸಹೋದರ ಆಗಿರುವ ಇವರು, ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ನೀವೆಲ್ಲರೂ ರಾಮನಾಗರದ ಜನರಿಗಿಂತಲೂ ಹೆಚ್ಚು ಅಭಿಮಾನ ತೋರಿ ಬರಮಾಡಿಕೊಂಡಿದ್ದೀರಿ. ಎಲ್ಲರಿಗೂ ಧನ್ಯವಾದ ಎಂದು ಶಿವಕುಮಾರ್ ನುಡಿದರು.