ಬೆಂಗಳೂರು: ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಟ್ರೈಲರ್ ನಿನ್ನೆ ಬಿಡುಗಡೆಯಾಗಿದೆ. ಈ ಸಿನಿಮಾದ ಟ್ರೈಲರ್ ನಲ್ಲಿ ಮಗುವಿನ ಕಿವಿಯಲ್ಲಿ ಬೆರ್ಮೆ ಎಂದು ಹೇಳಿ ನಾಮಕರಣ ಮಾಡುವ ದೃಶ್ಯವಿದೆ. ಈ ಸಿನಿಮಾದ ಮೂಲ ಕತೆಯೇ ಬೆರ್ಮೆಯ ಕುರಿತಾಗಿ. ಅಷ್ಟಕ್ಕೂ ಬೆರ್ಮೆ ಎಂದರೆ ಯಾರು? ಹಿನ್ನಲೆಯೇನು ಇಲ್ಲಿದೆ ವಿವರ.
ಕಾಂತಾರ ಮೊದಲ ಭಾಗದಲ್ಲಿ ಗುಳಿಗ ಮತ್ತು ಪಂಜುರ್ಲಿ ದೈವಗಳ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದರು. ಈ ಮೂಲಕ ಕರಾವಳಿಯ ದೈವದ ಕತೆಗಳು ಇಡೀ ಜಗತ್ತಿಗೇ ಪರಿಚಯವಾಗಿದೆ. ಇದೀಗ ಕಾಂತಾರ ಚಾಪ್ಟರ್ 1 ರಲ್ಲಿ ಬೆರ್ಮೆಯ ಕತೆ ಹೇಳಿದ್ದಾರೆ.
ಬೆರ್ಮೆ ಎಂದರೆ ಒಂದು ವಾದದ ಪ್ರಕಾರ ತುಳುನಾಡಿನ ಸೃಷ್ಟಿಕರ್ತ. ಆತ ಎಲ್ಲಾ ದೈವಗಳಿಗೇ ರಾಜ ಎಂದು ನಂಬಲಾಗಿದೆ. ಬೆರ್ಮರಾಧನೆಗೆ ತುಳುನಾಡಿನಲ್ಲಿ ಅದರದ್ದೇ ಆದ ಗೌರವವಿದೆ. ಇಲ್ಲಿನ ಸಂಸ್ಕೃತಿಯ ಭಾಗವೇ ಆಗಿದೆ. ದಕ್ಷಿಣ ಕನ್ನಡ ಭಾಗದಲ್ಲಿ ಬೆರ್ಮೆ ದೈವವನ್ನು ಬೆರ್ಮೆರ್, ಬೊಮ್ಮೆ ಎಂಬಿತ್ಯಾದಿ ಹೆಸರಿನಿಂದ ಕರೆಯುತ್ತಾರೆ.
ಇತರೆ ದೈವಗಳಂತೆ ಬೆರ್ಮೆ ಬಗ್ಗೆ ಬಹುತೇಕರಿಗೆ ಹೆಚ್ಚು ಗೊತ್ತಿರಲಿಕ್ಕಿಲ್ಲ. ಆದರೆ ಕಾಂತಾರ ಚಾಪ್ಟರ್ 1 ರಲ್ಲಿ ದೈವಗಳ ರಾಜ ಬೆರ್ಮೆಯ ಇತಿಹಾಸ, ಹಿನ್ನಲೆಯನ್ನು ರಿಷಬ್ ಶೆಟ್ಟಿ ತೋರಿಸಿದ್ದಾರೆ. ಈ ಮೂಲಕ ತುಳುನಾಡಿನ ಮತ್ತೊಂದು ಇತಿಹಾಸವನ್ನು ಜನರಿಗೆ ತೆರೆದಿಡುತ್ತಿದ್ದಾರೆ.