ಬೆಂಗಳೂರು: ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದ್ದು ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ.
ಕಾಂತಾರ ಚಾಪ್ಟರ್ 1 ಸಿನಿಮಾ ಅಕ್ಟೋಬರ್ 2 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಕ್ರೇಜ್ ಗಗನಕ್ಕೇರಿದೆ. ಸಿನಿಮಾ ನೋಡಲು ಜನ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು ಇದನ್ನು ನೋಡಿ ಜನ ನಗಬೇಕೋ, ಗಾಬರಿಯಾಗಬೇಕೋ ತಿಳಿಯದಂತಾಗಿದೆ.
ಕಾಂತಾರ ಚಾಪ್ಟರ್ ಟ ಸಿನಿಮಾ ನೋಡುವ ಮೊದಲು ಕೆಲವು ಸಂಕಲ್ಪ ಮಾಡಬೇಕು. ಮೂರು ದೈವೀಕ ಸಂಕಲ್ಪ ಮಾಡಿದರೆ ಮಾತ್ರ ಸಿನಿಮಾ ನೋಡಲು ಅವಕಾಶವಿದೆ. ಮೊದಲನೆಯದ್ದು ಮದ್ಯಪಾನ ಮಾಡಬಾರದು. ಎರಡನೆಯದಾಗಿ ಧೂಮಪಾನ ಮಾಡಬಾರದು. ಮೂರನೆಯದ್ದಾಗಿ ನಾನ್ ವೆಜ್ ಆಹಾರ ತಿನ್ನಬಾರದು.
ಈ ಮೂರು ಸಂಕಲ್ಪ ಮಾಡಿ ಶುದ್ಧರಾದರೆ ಮಾತ್ರ ಕಾಂತಾರ ಚಾಪ್ಟರ್ ಸಿನಿಮಾ ನೋಡಬಹುದು ಎಂದು ಯಾರೋ ಸುಳ್ಳು ಸುದ್ದಿಯೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿಸುತ್ತಿದ್ದಾರೆ. ಇದರ ಬಗ್ಗೆ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ರಿಷಬ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಯಾರ ಆಹಾರ ಪದ್ಧತಿ ಹೇಗಿರಬೇಕು ಎಂದು ನಿರ್ಧರಿಸುವ ಹಕ್ಕು ನಮಗಿಲ್ಲ. ಚಿತ್ರತಂಡದಿಂದ ಇಂತಹ ಯಾವುದೇ ಸುದ್ದಿಯನ್ನು ಪ್ರೋತ್ಸಾಹಿಸುವುದಿಲ್ಲ. ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ರಿಷಬ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.