ಬಳ್ಳಾರಿ: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎ2 ಆರೋಪಿ ದರ್ಶನ್ ಮತ್ತು ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ತೀರ್ಪು ಇಂದು ಪ್ರಕಟವಾಗುವ ನಿರೀಕ್ಷೆಯಿದೆ.ಈ ಸೋಮವಾರ ಅವರಿಗೆ ಬಿಡುಗಡೆ ಸಿಗಬಹುದು ಎಂದು ಅಭಿಮಾನಿಗಳು ನಿರೀಕ್ಷೆಯಲ್ಲಿದ್ದಾರೆ.
ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ 17 ಆರೋಪಿಗಳು ಅರೆಸ್ಟ್ ಆಗಿದ್ದರು. ಈ ಪೈಕಿ ಮೂವರಿಗೆ ಈಗಾಗಲೇ ಜಾಮೀನು ಸಿಕ್ಕಿದೆ. ಆರೋಪಿಗಳು ಈಗಾಗಲೇ 100 ಕ್ಕೂ ಹೆಚ್ಚು ದಿನ ಜೈಲು ವಾಸ ಅನುಭವಿಸಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ದರ್ಶನ್, ಪವಿತ್ರಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಶುಕ್ರವಾರ ಇಬ್ಬರ ಬೇಲ್ ಅರ್ಜಿಯೂ ವಿಚಾರಣೆಗೆ ಬಂದಿತ್ತು. ಈ ವೇಳೆ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು. ಹೀಗಾಗಿ ದರ್ಶನ್ ಮತ್ತು ಪವಿತ್ರಾ ಮತ್ತೆ ಎರಡು ದಿನ ಕಾದು ಕೂರಬೇಕಾಯಿತು. ಇಂದು ದರ್ಶನ್ ಬಿಡುಗಡೆಯಾದರೆ ಅವರನ್ನು ಕರೆತರಲು ಆಪ್ತರು ಹೆಲಿಕಾಪ್ಟರ್ ಬುಕ್ ಮಾಡಿ ಕಾಯುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.
ಸದ್ಯಕ್ಕೆ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದರೆ, ಅತ್ತ ಪವಿತ್ರಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಇಬ್ಬರೂ ಪ್ರಭಾವೀ ವ್ಯಕ್ತಿಗಳಾಗಿರುವುದರಿಂದ ಜಾಮೀನು ಸಿಗುವುದು ಕಷ್ಟವೆಂದೇ ಹೇಳಲಾಗುತ್ತಿದೆ. ಹಾಗಿದ್ದರೂ ಇಂದು ಗುಡ್ ನ್ಯೂಸ್ ಸಿಗಬಹುದು ಎಂದು ದರ್ಶನ್, ಪವಿತ್ರಾ ಕಾಯುತ್ತಿದ್ದಾರೆ.