Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳ ಪೈಕಿ ಮೂವರಿಗೆ ಇಂದು ಬಿಡುಗಡೆಯ ಭಾಗ್ಯ ದೊರೆಯಲಿದೆ.
ಎ15, ಎ16 ಮತ್ತು ಎ17 ಗಳಾದ ಕಾರ್ತಿಕ್, ನಿಖಿಲ್ ಮತ್ತು ಕೇಶವ ಮೂರ್ತಿ ಇಂದು ಸಂಜೆ ಜೈಲಿನಿಂದ ರಿಲೀಸ್ ಆಗುವ ಸಾಧ್ಯತೆಯಿದೆ. ಈ ಮೂವರು ಆರೋಪಿಗಳ ಮೇಲೆ ನೇರವಾಗಿ ಕೊಲೆಯಲ್ಲಿ ಭಾಗಿಯಾದ ಆರೋಪವಿರಲಿಲ್ಲ. ಬದಲಾಗಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪವಿತ್ತು.
ಈ ಮೂವರು ಆರೋಪಿಗಳಿಗೆ ಸೋಮವಾರ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆದರೆ ಅಧಿಕೃತವಾಗಿ ಜೈಲು ಅಧಿಕಾರಿಗಳಿಗೆ ನ್ಯಾಯಾಲಯದ ಆದೇಶ ಬಾರದೇ ಬಿಡುಗಡೆ ಸಾಧ್ಯವಾಗದು. ಇದೀಗ ಜೈಲು ಅಧಿಕಾರಿಗಳು ನ್ಯಾಯಾಲಯದ ಆದೇಶ ಪಡೆದ ಬಳಿಕ ಇಂದು ಸಂಜೆ ಮೂವರನ್ನು ರಿಲೀಸ್ ಮಾಡುವ ಸಾಧ್ಯತೆಯಿದೆ.
ರೇಣುಕಾಸ್ವಾಮಿ ಮರ್ಡರ್ ಕೇಸ್ ನ ಎಲ್ಲಾ ಆರೋಪಿಗಳನ್ನೂ ಒಂದೊಂದು ಜೈಲಿನಲ್ಲಿರಿಸಲಾಗಿದೆ. ಕಾರ್ತಿಕ್, ನಿಖಿಲ್, ಕೇಶವಮೂರ್ತಿ ತುಮಕೂರು ಜೈಲಿನಲ್ಲಿದ್ದಾರೆ. ಈ ಮೂವರೂ ರೇಣುಕಾಸ್ವಾಮಿಯ ಶವ ಸಾಗಿಸಲು ಮತ್ತು ಆತನ ಕೊಲೆಯನ್ನು ನಾವೇ ಮಾಡಿದ್ದಾಗಿ ಪೊಲೀಸರ ಬಳಿ ಶರಣಾಗಲು ಬಂದಿದ್ದರು.