ದುಬೈ: ಐಪಿಎಲ್ 13 ರಲ್ಲಿ ಮತ್ತೊಮ್ಮೆ ಕೂದಲೆಳೆಯ ಅಂತರದಲ್ಲಿ ಸೋತ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಈಗ ದಿಕ್ಕೆಟ್ಟು ಕುಳಿತಿದ್ದಾರೆ.
ನನಗೆ ಏನು ಹೇಳಬೇಕೆಂದೇ ತೋಚುತ್ತಿಲ್ಲ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ. ಕೆಕೆಆರ್ ವಿರುದ್ಧ ಗೆಲ್ಲಬೇಕಿದ್ದ ಪಂದ್ಯವನ್ನು ಕೊನೆಯ ಗಳಿಗೆಯಲ್ಲಿ ಕೈ ಚೆಲ್ಲಿದ ರಾಹುಲ್ ನಿರಾಸೆಯಲ್ಲಿದ್ದಾರೆ. ಜತೆಗೆ ಟ್ವಿಟರಿಗರೂ ರಾಹುಲ್- ಕೋಚ್ ಅನಿಲ್ ಕುಂಬ್ಳೆಗೆ ಟೀಕೆಗಳ ಸುರಿಮಳೆ ಸುರಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 164 ರನ್ ಗಳ ಮೊತ್ತ ನೀಡಿತ್ತು. ಈ ಮೊತ್ತವನ್ನು ಆತ್ಮವಿಶ್ವಾಸದಿಂದಲೇ ಬೆನ್ನತ್ತಿದ ಪಂಜಾಬ್ ಕೊನೆಯ 18 ನೇ ಓವರ್ ನವರೆಗೂ ಗೆಲುವು ತನ್ನದೇ ಎಂಬ ಕನಸಿನಲ್ಲಿತ್ತು. ಆದರೆ ಕೊನೆಯ ಎರಡು ಓವರ್ ಗಳಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಕೆಕೆಆರ್ ಅಂತಿಮ ಓವರ್ ನಲ್ಲಿ ಪಂಜಾಬ್ ಗೆ 2 ರನ್ ಗಳ ಸೋಲುಣಿಸಿತು. ಈ ಸೋಲಿನ ಹತಾಶೆಯನ್ನು ಪಂಜಾಬ್ ಎಂದಿಗೂ ಮರೆಯುವ ಹಾಗೇ ಇಲ್ಲ. ಸತತ ಆರು ಸೋಲಿನಿಂದ ತಂಡ ಕಂಗೆಟ್ಟು ಕುಳಿತಿದೆ. ವಿಪರ್ಯಾಸವೆಂದರೆ ಐಪಿಎಲ್ ಕೂಟದಲ್ಲಿ ಗರಿಷ್ಠ ರನ್ ಸರದಾರನೆಂಬ ಗರಿಮೆ ಹೊಂದಿರುವ ರಾಹುಲ್ ಗೆ ತಂಡವನ್ನು ಗೆಲ್ಲಿಸಲಾಗುತ್ತಿಲ್ಲ.