Publish Date: Sun, 11 Oct 2020 (09:39 IST)
Updated Date: Sun, 11 Oct 2020 (09:40 IST)
ದುಬೈ: ಐಪಿಎಲ್ 13 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಓಟ ಮುಂದುವರಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 37 ರನ್ ಗಳಿಂದ ಜಯ ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಉತ್ತಮ ಫಾರ್ಮ್ ಮುಂದುವರಿಸಿದ ದೇವದತ್ತ್ ಪಡಿಕ್ಕಲ್ 33 ರನ್ ಗಳಿಸಿದರು. ಆದರೆ ತಂಡಕ್ಕೆ ಬಲ ಒದಗಿಸಿದ್ದು ನಾಯಕ ಕೊಹ್ಲಿ ಬ್ಯಾಟಿಂಗ್. ಕೊಹ್ಲಿ 52 ಎಸೆತಗಳಲ್ಲಿ ಅಜೇಯ 90 ರನ್ ಗಳಿಸಿ ತಂಡಕ್ಕೆ ಉತ್ತಮ ಮೊತ್ತ ಗಳಿಸಿಕೊಡುವಲ್ಲಿ ಪ್ರಧಾನ ಪಾತ್ರವಹಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಆರಂಭದಲ್ಲೇ ಕುಸಿತಕ್ಕೊಳಗಾಯಿತು. ಮಧ‍್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು 42. ನಾರಾಯಣ್ ಜಗದೀಶ್ 33 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಪ್ರತಿರೋಧ ಬರಲಿಲ್ಲ. ಹೀಗಾಗಿ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್ ಸಿಬಿ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಕ್ರಿಸ್ ಮೋರಿಸ್ 3 ವಿಕೆಟ್ ಕಬಳಿಸಿದರು.