ದುಬೈ: ಐಪಿಎಲ್ 13 ರಲ್ಲೂ ರಾಯಲ್ ಚಾಲೆಂಜರ್ಸ್ ಕಳಪೆ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟೀಕಿಸಿದ್ದಾರೆ.
ಈ ಹಿಂದೆಯೂ ಆರ್ ಸಿಬಿ ನಾಯಕರಾಗಿ ಕೊಹ್ಲಿಯನ್ನು ಟೀಕಿಸಿದ್ದ ಗಂಭೀರ್ ಈಗ ಮತ್ತೆ ಇದೇ ಮಾತನ್ನಾಡಿದ್ದು, ಬೆಂಗಳೂರು ಕೊಹ್ಲಿ ಹೊರತಾದ ಹೊಸ ನಾಯಕನನ್ನು ಹುಡುಕುವುದು ಉತ್ತಮ ಎಂದಿದ್ದಾರೆ. ಎಂಟು ವರ್ಷ ಎನ್ನುವುದು ಸಾಕಷ್ಟು ಸಮಯ ನೀಡಿದಂತಾಯ್ತು. ಪಂಜಾಬ್ ತಂಡವನ್ನೇ ನೋಡಿ, ಎರಡು ವರ್ಷ ಅಶ್ವಿನ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲವೆಂದು ಅವರನ್ನು ಕಿತ್ತು ಹಾಕಲಾಯಿತು. ಧೋನಿ, ರೋಹಿತ್ ಅವರನ್ನು ನೋಡಿ. ಅವರು ತಮ್ಮ ತಂಡಕ್ಕೆ ಸುದೀರ್ಘ ಸಮಯದಿಂದ ನಾಯಕತ್ವ ವಹಿಸಿದ್ದು ಮಾತ್ರವಲ್ಲ, ಚಾಂಪಿಯನ್ ಪಟ್ಟಕ್ಕೇರಿಸಿದರು. ಒಂದು ವೇಳೆ ಧೋನಿ, ರೋಹಿತ್ ಕೂಡಾ ಪ್ರದರ್ಶನ ನೀಡಿರದೇ ಇದ್ದಿದ್ದರೆ ಅವರನ್ನೂ ಕಿತ್ತು ಹಾಕಲಾಗುತ್ತಿತ್ತು ಎಂದು ಗಂಭೀರ್ ಹೇಳಿದ್ದಾರೆ.