ದುಬೈ: ಕೊರೋನಾ ನಡುವೆಯೂ ಕ್ರಿಕೆಟ್ ಆಯೋಜಿಸುತ್ತಿರುವಾಗ ಯಾವುದೇ ಆರೋಗ್ಯ ತೊಂದರೆಯಾಗದಂತೆ ಆಯೋಜಕರು ಆಟಗಾರರಿಗೆ ಜೈವರಕ್ಷಕ ವಲಯದಲ್ಲಿ ಸುರಕ್ಷತೆ ನೀಡುತ್ತಿದ್ದಾರೆ.
ಆದರೆ ಈ ರೀತಿ ಆಟಗಾರರನ್ನು ಸುರಕ್ಷತೆಯ ನಿಟ್ಟಿನಲ್ಲಿ ಕೋಟೆ ಕಟ್ಟಿ ಅದರೊಳಗೆ ಕೂಡಿಹಾಕುವುದರಿಂದ ಮಾನಸಿಕವಾಗಿ ಖಿನ್ನತೆಗೊಳಗಾಗುವ ಸಾಧ‍್ಯತೆಯಿದೆ. ಹೀಗಾಗಿ ಕ್ರಿಕೆಟಿಗರ ಮಾನಸಿಕ ಸ್ವಾಸ್ಥ್ಯ ಕಾಪಾಡುವ ಬಗ್ಗೆ ಐಸಿಸಿ ಗಮನ ಹರಿಸಬೇಕು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಗ್ರಹಿಸಿದ್ದಾರೆ. ಐಪಿಎಲ್ ಸುದೀರ್ಘ ಕೂಟ ಮುಗಿಸಿ ಈಗ ಕ್ರಿಕೆಟಿಗರು ಆಸ್ಟ್ರೇಲಿಯಾ ಪ್ರವಾಸ ತೆರಳಲಿದ್ದಾರೆ. ಇದೂ ಕೂಡಾ ಸುದೀರ್ಘ ಪ್ರವಾಸವಾಗಿದ್ದು, ಅಲ್ಲಿಯೂ ಸೋಂಕು ತಗುಲದಂತೆ ಆಟಗಾರರನ್ನು ಜೈವರಕ್ಷಕ ವಲಯದಲ್ಲಿ ಕೂಡಿಹಾಕಲಾಗುತ್ತದೆ. ಆದರೆ ಇದರಿಂದ ಕ್ರಿಕೆಟಿಗರು ಹೊರಗಡೆ ಓಡಾಡುವ ಸ್ವಾತಂತ್ರ್ಯವಿಲ್ಲದೇ ಮಾನಸಿಕವಾಗಿ ಕುಗ್ಗಿ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂಬುದು ಕೊಹ್ಲಿಯ ವಾದ.