ಹಳೆಯ ವರ್ಷ ಕಳೆದು ಹೊಸ ವರ್ಷ ಬರುವಾಗ ಈ ವರ್ಷ ಇಂಥದ್ದನ್ನು ಸಾಧಿಸಿಯೇ ತೀರುತ್ತೇನೆ ಎಂಬ ಹೊಸ ವರ್ಷದ ನಿರ್ಣಯ ಕೈಗೊಳ್ಳುವುದೊಂದು ವಾಡಿಕೆ. ಸಿಗರೇಟು ಬಿಡುತ್ತೇನೆ, ಮದ್ಯಪಾನ ತ್ಯಜಿಸುತ್ತೇನೆ, ಈ ವರ್ಷ ಕಾರು ಖರೀದಿಸುತ್ತೇನೆ, ಪರೀಕ್ಷೆಯಲ್ಲಿ ಸೂಪರ್ ಕ್ಲಾಸ್ ಅಂಕಗಳನ್ನು ತೆಗೆಯುತ್ತೇನೆ ಎಂಬಿತ್ಯಾದಿಯಾಗಿ.... ಅದೇ ರೀತಿ ಇಂತಿಷ್ಟು ತೂಕ ಕಳೆದುಕೊಳ್ಳುತ್ತೇನೆ ಎಂಬ ನಿರ್ಣಯ ಕೈಗೊಳ್ಳುವವರಿಗೇನೂ ಬರವಿಲ್ಲ.
ಹಾಗಿದ್ದರೆ ತೂಕ ಕಳೆದುಕೊಳ್ಳುವ ನಿರ್ಣಯ ಕೈಗೊಂಡವರಿಗೆ ಸಹಾಯ ಮಾಡುತ್ತಿದ್ದಾರೆ ವಾಷಿಂಗ್ಟನ್ ಸಿಯಾಟ್ಲ್‌ನ ಫ್ರೆಡ್ ಹಚಿನ್ಸನ್ ಕ್ಯಾನ್ಸರ್ ಸಂಶೋಧನಾ ಕೇಂದ್ರದ ತಜ್ಞರು. ಆ ಆರು ಟಿಪ್ಸ್‌ಗಳು ಹೀಗಿವೆ:
1. ಪ್ರತಿದಿನವೂ ಚಲನೆಯಿರಲಿ
ಒಂದಿಷ್ಟು ತೂಕ ಕಳೆದುಕೊಳ್ಳಲು ನೀವು ವ್ಯಯಿಸಬೇಕಿರುವುದು ಪ್ರತಿದಿನ ಒಂದರ್ಧ ಗಂಟೆಯ ಏರೋಬಿಕ್ ಚಟುವಟಿಕೆ.
ಇದಕ್ಕೆ ನೀವೇನೂ ಅಥ್ಲೀಟ್ ಆಗಬೇಕಿಲ್ಲ. ಬಿರುಸಿನ ನಡಿಗೆ ಅಥವಾ ನಿಮ್ಮ ನೆಚ್ಚಿನ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿಯುವುದು, ಅಥವಾ ಸ್ಟೇಶನರಿ ಬೈಕ್ ಇಲ್ಲವೇ ಟ್ರೆಡ್‌ಮಿಲ್‌ನಂತಹಾ ಏರೋಬಿಕ್ ಯಂತ್ರದಲ್ಲಿ ದೈಹಿಕ ಅಭ್ಯಾಸ ಮಾಡಿದರೆ ಸಾಕು. ಆದರೆ ಏನಪ್ಪಾ ಅಂದ್ರೆ, ನೀವು ಪ್ರತಿ ದಿನವೂ ತಪ್ಪದೇ ಇದನ್ನು ಮಾಡುತ್ತಿರಬೇಕು. ಉದಾಸೀನ ಮಾಡಿದರೆ ಕೆಲಸ ಕೆಡುತ್ತದೆ. ನಿರ್ಣಯವು ನಿರ್ಣಯ ಪುಸ್ತಕದಲ್ಲೇ ಇರುತ್ತದೆ. ಕಷ್ಟವೆಂದಾದರೆ ಈ ಅರ್ಧ ಗಂಟೆಯನ್ನು ಎರಡು ಭಾಗ ಮಾಡಿ, ಒಂದು ದಿನದಲ್ಲಿ ಕಾಲು ಕಾಲು ಗಂಟೆಯ ಎರಡು ಅವಧಿಯಲ್ಲಿ ಇದನ್ನು ಮಾಡಿ.
2. ನಿಮ್ಮ ಆಹಾರದ ಮೇಲೆ ಗಮನವಿರಿಸಿ
ನೀವು ತಿನ್ನುವ ಮತ್ತು ಕುಡಿಯುವ ಪ್ರತಿಯೊಂದನ್ನೂ ಬರೆದಿಡಲು ಒಂದಿಷ್ಟು ಹೊತ್ತು ವ್ಯಸಿಸಬೇಕು. ಹೀಗಾದರೆ, ಈ ಎಕ್ಸ್‌ಟ್ರಾ ಕ್ಯಾಲೊರಿ ಎಲ್ಲಿಂದ ಬಂತು ಎಂಬುದರ ಮೇಲೆ ಹದ್ದಿನ ಕಣ್ಣಿಟ್ಟು, ಸಪೂರ ಆಗಲೇಬೇಕು ಎಂದು ಪಣ ತೊಟ್ಟಿದ್ದರೆ ಅದನ್ನು ಪತ್ತೆ ಹಚ್ಚಿ ನಿವಾರಿಸಲು ನೆರವಾಗುತ್ತದೆ. ನಾವು ಸಾಮಾನ್ಯವಾಗಿ ದಿನಂಪ್ರತಿ ಸೇವಿಸುವ ಆಹಾರಗಳಲ್ಲಿ ಎಷ್ಟು ಕ್ಯಾಲೊರಿ ಎನರ್ಜಿ ಇರುತ್ತದೆ ಎಂಬುದನ್ನು ತಿಳಿಯಲು ಆನ್‌ಲೈನ್‌ನಲ್ಲಿ ಸಾಕಷ್ಟು ಟೂಲ್‌ಗಳು ಲಭ್ಯವಿರುತ್ತವೆ. ಇದು ನಮ್ಮ ತೂಕ ಕಳೆದುಕೊಂಡಿದ್ದರ ಜಾಡು ಹಿಡಿಯಲು ಕೂಡ ಸಹಾಯ ಮಾಡುತ್ತದೆ.
3. ಸಾಧಿಸಬಹುದಾದ ಗುರಿ ಇರಿಸಿಕೊಳ್ಳಿ
ದೀರ್ಘಕಾಲದ ಪ್ರಯೋಜನ ಪಡೆಯಬೇಕಿದ್ದರೆ, ನಿಧಾನವಾಗಿ, ಆದರೆ ನಿರಂತರವಾಗಿ ಅಂದರೆ ವಾರಕ್ಕೆ ಅರ್ಧ-ಒಂದು ಕಿಲೋ ತೂಕ ಕಳೆದುಕೊಳ್ಳುವ ಗುರಿ ಇರಿಸಿಕೊಳ್ಳಿ. ಯಾಕೆಂದರೆ, ಸ್ವಲ್ಪ ದಿನಗಳ ಬಳಿಕ ತೂಕ ಏರಿಸಿಕೊಳ್ಳಲೆಂದೇ, ಬೇಗ ಬೇಗನೇ ತೂಕ ಕಳೆದುಕೊಳ್ಳುವುದು ಯಾರಿಗೂ ಇಷ್ಟವಿಲ್ಲ ಅಲ್ವೇ?
4. ಗುರಿ ನಿರ್ದಿಷ್ಟವಾಗಿರಲಿ
ಹಲವಾರು ಸಣ್ಣಪುಟ್ಟ, ಆದರೆ ಹೆಚ್ಚು ನಿರ್ದಿಷ್ಟವಾದ ಗುರಿಗಳನ್ನು ಇರಿಸಿಕೊಳ್ಳಿ. ಅಂದರೆ, ದಿನಕ್ಕೆ ಐದು ಬಾರಿ ತರಕಾರಿ ತಿನ್ನುತ್ತೇನೆ, ಊಟಕ್ಕೆ ಮೊದಲು ಪ್ರತಿದಿನ ಕಾಲು ಗಂಟೆ ನಡೆಯುತ್ತೇನೆ, ಅಥವಾ ದಿನಕ್ಕೆ ಆರು ಗ್ಲಾಸು ನೀರು ಕುಡಿಯುತ್ತೇನೆ ಮುಂತಾದವು.
ತೂಕ ಇಳಿಸಿಕೊಳ್ಳಲು 'ಅದು ತಿನ್ನುವುದಿಲ್ಲ, ಇದು ಮಾಡುವುದಿಲ್ಲ' ಎಂಬಿತ್ಯಾದಿ ಶಪಥ ಹಾಕಿಕೊಳ್ಳುವ ಬದಲು, ನಿಮ್ಮ ದೈನಂದಿನ ಕಾರ್ಯಕ್ರಮಕ್ಕೆ ಒಂದು ಆರೋಗ್ಯಕರ ಚೌಕಟ್ಟು ನಿರ್ಮಿಸಿಕೊಳ್ಳುವುದೇ ಒಳ್ಳೆಯದು.
5. ಒಂದು ಕ್ಷಣ ಮೈಮರೆತು ಪ್ರಯತ್ನ ಮಣ್ಣುಗೂಡಲು ಬಿಡಬೇಡಿ
ಅದೊಂದು ದಿನ ಸಂಭ್ರಮದ ಔತಣಕೂಟದ ಆ ಒಂದು ಕ್ಷಣದಲ್ಲಿ ಮೈಮರೆತು, ಗೆಳೆಯರೊಂದಿಗೆ ಬೇಕಿದ್ದನ್ನೆಲ್ಲಾ ತಿನ್ನಬೇಕು ಅನ್ನಿಸಿದಾಕ್ಷಣ, ನೀವು ಇದುವರೆಗೆ ಪಟ್ಟ ಇಷ್ಟೂ ಶ್ರಮ ನೀರಲ್ಲಿಟ್ಟ ಹೋಮದಂತಾಗಲು ಬಿಡಬೇಡಿ. ಅದರ ಬದಲು, ನಿಮ್ಮ ಗುರಿ ಸಾಧಿಸುವ ಮಾರ್ಗದಲ್ಲಿರುವ ಅಡಚಣೆಗಳೇನೆಂಬುದನ್ನು ಮೊದಲೇ ಗುರುತಿಸಿಬಿಡಿ. ಇವತ್ತು ಸ್ನೇಹಿತರ ಬರ್ತ್‌ಡೇ ಪಾರ್ಟಿಯೋ, ಮದುವೆಗೋ ಹೋದರೆ, ನಿಮ್ಮ ತಪಸ್ಸು ಕೆಡುತ್ತದೆ ಎಂಬುದು ಅರಿವಿನಲ್ಲಿರಲಿ. ಕೈಗೆ ಸಿಕ್ಕಿದ್ದನ್ನು ತಿನ್ನುವ ಆಕಾಂಕ್ಷೆಯನ್ನು ಹೇಗೆಲ್ಲಾ ತಡೆಯಬಹುದು ಎಂದು ಮೊದಲೇ ಯೋಜಿಸಿ, ಯೋಚಿಸಿ.
6. ಯೋಗ ಅಭ್ಯಾಸ
ನಿಯಮಿತವಾಗಿ ಯೋಗಾಭ್ಯಾಸ ಮಾಡುವುದಕ್ಕೂ ತೂಕದ ನಿರ್ವಹಣೆ ಮತ್ತು ತೂಕ ಇಳಿಕೆ ಒಂದಕ್ಕೊಂದು ಖಂಡಿತಾ ಸಂಬಂಧ ಹೊಂದಿದೆ. ಇದಪ ಈಗಾಗಲೇ ಹಲವಾರು ಸಂಶೋಧನೆಗಳು, ಅಧ್ಯಯನಗಳಿಂದ ತಿಳಿದುಬಂದ ಸಂಗತಿಯಾಗಿರುವುದರಿಂದ, ಯೋಗವನ್ನೂ ಮರೆಯಬೇಡಿ.
ಒಟ್ಟಿನಲ್ಲಿ ತಾವೇನು ತಿನ್ನುತ್ತಿದ್ದೇವೆ ಎಂಬುದರ ಅರಿವುಳ್ಳವರು ಖಂಡಿತವಾಗಿಯೂ ಬೇಗನೇ ತೂಕ ಕಳೆದುಕೊಳ್ಳುವಲ್ಲಿ ಯಶಸ್ವಿಯಾಗುವರು. ಮತ್ತೆ ಯೋಗವೂ ಕೂಡ ತಿನ್ನುವುದರ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ನಮ್ಮ ಮನಸ್ಸಿನ ಮೇಲೂ ಪ್ರಭಾವ ಬೀರುತ್ತದೆಯೆಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ ಎಂಬುದೂ ನೆನಪಿರಲಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.