ಚಳಿಗಾಲದಲ್ಲಿ ಚರ್ಮದ ಆರೈಕೆ ಎಲ್ಲರಿಗೂ ಕಷ್ಟವೇ. ಕೈಕಾಲುಗಳೆಲ್ಲ ಬಿರುಕು ಬಿಟ್ಟು ನೋಡಲು ಅಸಹ್ಯವಾಗಿ ಕಂಡರೆ, ತುಟಿಯೂ ಒಣಗಿ ರಕ್ತ ಸೋರಿ, ಮುಖದ ಚರ್ಮವೂ ಒರಟಾಗಿ ಏನು ಮಾಡಲಿ ಎಂದು ಅರ್ಥವಾಗುವುದಿಲ್ಲ. ಇದು ಕೇವಲ ಹುಡುಗಿಯರ ಸಮಸ್ಯೆ ಮಾತ್ರವಲ್ಲ. ಹುಡುಗರದ್ದೂ ಕೂಡಾ ಬರುತ್ತದೆ.
ಎಲ್ಲ ವಯಸ್ಸಿನವರಿಗೂ ಚಳಿಗಾಲದಲ್ಲಿ ಚರ್ಮದ ರಕ್ಷಣಯೇ ದೊಡ್ಡ ಸಮಸ್ಯೆ. ಹಾಗಾಗಿ ಚಳಿಗಾಲದಲ್ಲಿ ಚರ್ಮ ನುಣುಪಾಗಿರಲು ವಯಸ್ಸು ಹಾಗೂ ಲಿಂಗಬೇಧವಿಲ್ಲದೆ ಮನೆಯಲ್ಲೇ ಮಾಡಬಹುದಾದ ರಕ್ಷಣೆಯ ಕೆಲವು ವಿಧಾನಗಳು ಇಲ್ಲಿವೆ. ಪ್ರಯತ್ನಿಸಿ ನೋಡಿ.
ಬಾಳೆಹಣ್ಣಿನ ಮಾಸ್ಕ್- ನಿಮ್ಮ ಮುಖದ ಚರ್ಮ ಎಣ್ಣೆಯುಕ್ತ ಹಾಗೂ ಒಣ ತ್ವಚೆಯಾಗಿದ್ದರೆ, ಬಾಳೆಹಣ್ಣಿನ ಮಾಸ್ಕ್ ಪ್ರಯೋಗಿಸಬಹುದು. ಚೆನ್ನಾಗಿ ಹಿಸುಕಿದ ಬಾಳೆಹಣ್ಣನ್ನು ಸ್ವಲ್ಪ ಕೆನೆಯೊಂದಿಗೆ ಸೇರಿಸಿ ಮಿಕ್ಸ್ ಮಾಡಿ ಸ್ವಚ್ಛ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಇದಜು ನಿಮ್ಮ ಮುಖವನ್ನು ತುಂಬ ನಯವಾಗಿಸುತ್ತದೆ. ಚಳಿಗಾಲಕ್ಕೆ ಇದು ಹೇಳಿ ಮಾಡಿಸಿದ ಮಾಸ್ಕ್.
ಮೊಟ್ಟೆಯ ಬಿಳಿಲೋಳೆಯ ಮಾಸ್ಕ್- ಮೊಟ್ಟೆಯ ಬಿಳಿ ಲೋಳೆಯನ್ನು ಚೆನ್ನಾಗಿ ಬೀಟ್ ಮಾಡಿ, ಅದನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಈ ಮಾಸ್ಕ್ ನಿಮ್ಮ ಮುಖವನ್ನು ರಿಫ್ರೆಶ್ ಮಾಡುವುದಲ್ಲದೆ, ನಿಮ್ಮ ಚರ್ಮರಂಧ್ರಗಳನ್ನು ಟೈಟ್ ಮಾಡಿಸುತ್ತದೆ. ಇದು ನಿಮ್ಮನ್ನು ಇನ್ನು ಆರೋಗ್ಯಯುತವಾಗಿ ಕಂಗೊಳಿಸುವಂತೆ ಮಾಡುತ್ತದೆ. ಚಳಿಗಾಲದಲ್ಲಂತೂ ಇದು ಕಟುವಾದ ಚಳಿಗಾಳಿಗಳಿಂದ ನಿಮ್ಮ ಚರ್ಮಕ್ಕೆ ಸುರಕ್ಷೆ ನೀಡುತ್ತದೆ.
ಹಾಲಿನ ಮಾಸ್ಕ್- ಚಳಿಗಾಲದಲ್ಲಿ ಕಚೇರಿಗೆ ಹೋಗುವ ಮಂದಿಯ ಕಷ್ಟವಂತೂ ಹೇಳತೀರದು. ಹೊರಗಿನ ವಾತಾವರಣದ ಚಳಿಗಾಳಿಗೆ ಮುಖದ ಚರ್ಮ ಬಹುಬೇಗನೆ ಬಿರುಸಾಗುತ್ತದೆ. ಅದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲು ಸರಿಯಾದ ಸಮಯದ ಕೊರತೆಯೂ ಕಾಡುತ್ತದೆ. ಆಧರೆ ಮನೆಯಲ್ಲೇ ಸುಲಭವಾಗಿ ಹೆಚ್ಚು ಸಮಯ ಅಗತ್ಯವಿಲ್ಲದ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಬಹುದು. ಹಾಲಿನ ಮಾಸ್ಕ್ ಕೂಡಾ ಅಂತಹ ಪ್ಯಾಕ್‌ಗಳಲ್ಲೊಂದು. ಹಾಲಿನ ಕೆನೆ, ಸ್ವಲ್ಪ ಮೊಸರು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಕಚೇರಿ ಕೆಲಸದಿಂದ ಸುಸ್ತಾಗಿರುವ ಮುಖದ ಚರ್ಮಕ್ಕಿದು ತಾಜಾತನದ ಅನುಭೂತಿ ನೀಡುವ ಜೊತೆಗೆ ಚಳಿಗಾಲದ ಚರ್ಮದ ತೊಂದರೆಗಳನ್ನು ತೊಡೆದು ಹಾಕಿ ನಯವಾದ ಮುಖದ ಚರ್ಮ ನೀಡುತ್ತದೆ. 10. 15 ನಿಮಿಷದ ನಂತರ ಹಚ್ಚಿದ ಪ್ಯಾಕ್ ತೊಳೆಯಬಹುದು.
ಬೆಣ್ಣೆಹಣ್ಣಿನ ಮಾಸ್ಕ್- ಚಳಿಗಾಲದಲ್ಲಿ ಹೆಚ್ಚು ಒಣಚರ್ಮವಾಗಿರುವ ಮಂದಿಗೆ ಸೂಕ್ತ ಮಾಸ್ಕ್ ಎಂದರೆ ಅದು ಬೆಣ್ಣೆಹಣ್ಣಿನ ಮಾಸ್ಕ್. ಬೆಣ್ಣೆಹಣ್ಣಿನ ಒಳಗಿನ ಭಾಗವನ್ನು ತೆಗೆದು ಅದನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಆಲಿವ್ ಆಯಿಲ್ ಸೇರಿಸಿ ಮುಖಕ್ಕೆ ಹಚ್ಚಿ. ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಚಳಿಗಾಲದ ಒಣಗುವಿಕೆಯ್ನನು ತಡೆಯಲು ಇದು ಚರ್ಮಕ್ಕೆ ಎಲ್ಲಾ ರೀತಿಯ ವಿಟಮಿನ್, ಪೋಷಣೆಯನ್ನು ನೀಡುವುದರಿಂದ ಇದು ಹೆಚ್ಚು ಒಣಗುವ ಒಡೆಯುವ ಚರ್ಮದವರಿಗೆ ಅತ್ಯುತ್ತಮ.
ಜೇನಿನ ಮಾಸ್ಕ್- ಜೇನು ಒಂದೆರಡು ಚಮಚ ತೆಗೆದುಕೊಂಡು ಅದಕ್ಕೆ ರೋಸ್ ವಾಟರ್ ಒಂದು ಚಮಚ ಸೇರಿಸಿ. (ರೋಸ್ ವಾಟರ್ ಸೇರಿಸದೆಯೂ ಹಾಗೆಯೇ ಜೇನನ್ನೂ ಮುಖಕ್ಕೆ ಹಚ್ಚಿಕೊಳ್ಳಬಹುದು) ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ.
ಪಪ್ಪಾಯಿ ಫೇಸ್ ಪ್ಯಾಕ್- ಪಪ್ಪಾಯಿ ಹಣ್ಣನ್ನು ಹಿಸುಕಿ ಚೆನ್ನಾಗಿ ಪೇಸ್ಟ್ ಮಾಡಿ ಮುಖ, ಕುತ್ತಿಗೆಗೆ ಹಚ್ಚಿ. 15 ನಿಮಿಷ ಬಿಟ್ಟು ತೊಳೆಯಿರಿ. ಚರ್ಮ ನುಣುಪಾಗಿ ಹೊಳೆಯುತ್ತದೆ.
ದ್ರಾಕ್ಷಿ ಮಾಸ್ಕ್- ದ್ರಾಕ್ಷಿ ಹಣ್ಣಿನ ಬೀಜ ತೆಗೆದು ಚೆನ್ನಾಗಿ ಪೇಸ್ಟ್ ಮಾಡಿ. ಇದನ್ನು ಚೆನ್ನಾಗಿ ಮುಖಕ್ಕೆ ಹಚ್ಚಿ ತೊಳೆಯಿರಿ.
ಬಾದಾಮಿ ಎಣ್ಣೆ, ಹಾಲು ಫೇಸ್ ಪ್ಯಾಕ್- ಬಾದಾಮಿ ಎಣ್ಣೆ, ಸ್ವಲ್ಪ ಸಕ್ಕರೆ ಹಾಗೂ ಬಿಸಿ ಮಾಡದ ತಾಜಾ ಹಾಲನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮುಖ, ಕತ್ತಿಗೆ ಲೇಪಿಸಿ 15 ನಿಮಿಷ ಬಿಟ್ಟು ತೊಳೆಯಿರಿ.
ಕ್ಯಾರೆಟ್- ಜೇನಿನ ಮಾಸ್ಕ್- ಕ್ಯಾರೆಟನ್ನು ತುರಿದು ಪೇಸ್ಟ್ ಮಾಡಿ. ಅದಕ್ಕೆ ಜೇನು ಸೇರಿಸಿ. ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ.
ತೆಂಗಿನ ಹಾಲಿನ ಮಾಸ್ಕ್- ತೆಂಗಿನಕಾಯಿ ತುರಿದು ಅದನ್ನು ರುಬ್ಬಿ ರಸ ತೆಗೆಯಿರಿ. ಹಾಗೇ ಆ ರಸವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಮಸಾಜ್ ಮಾಡಿ 15 ನಿಮಿಷ ಬಿಟ್ಟು ತೊಳೆಯಿರಿ.
ಟೊಮ್ಯಾಟೋ-ಮೊಸರಿನ ಪ್ಯಾಕ್- ಚೆನ್ನಾಗಿ ಪೇಸ್ಟ್ ಮಾಡಿದ ಟೊಮ್ಯಾಟೋಗೆ ಸ್ವಲ್ಪ ಮೊಸರು ಸೇರಿಸಿ. ಒಂದೆರಡು ಹನಿ ರೋಸ್ ವಾಟರ್ ಸೇರಿಸಿ ಮುಖಕ್ಕೆ ಈ ಮಿಶ್ರಣ ಹಚ್ಚಿ. 15 ನಿಮಿಷ ಬಿಟ್ಟು ತೊಳೆಯಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.