ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ 98 ರನ್ ಗಳಿಸಿ ಪಂದ್ಯ ಶ್ರೇಷ್ಠ ಪಡೆದ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ತಾವು ಆಡುವ ಬಳಗದಲ್ಲಿ ಇಲ್ಲದೇ ಇದ್ದಾಗ ಏನು ಮಾಡುತ್ತೇನೆಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಮಾತ್ರ ಶಿಖರ್ ಗೆ ಅವಕಾಶ ಸಿಕ್ಕಿತ್ತು. ಹಿರಿಯ ಆಟಗಾರನಾಗಿ ಆಡುವ ಬಳಗದಿಂದ ಹೊರಗಿರುವಾಗ ನಿಮ್ಮ ಭಾವನೆ ಏನಾಗಿರುತ್ತದೆ ಎಂದು ವೀಕ್ಷಕ ವಿವರಣೆಕಾರರು ಪ್ರಶ್ನಿಸಿದಾಗ ಶಿಖರ್ ಧವನ್ ತಮಾಷೆಯಾಗಿ ಉತ್ತರಿಸಿದ್ದಾರೆ.
ನಾನು ಆಡದೇ ಇದ್ದಾಗ ನನ್ನ ತಂಡಕ್ಕೆ ಯಾವ ರೀತಿ ಕೊಡುಗೆ ನೀಡಬಹುದು ಎಂದು ಯೋಚಿಸುತ್ತಿರುತ್ತೇನೆ. ಅದರಲ್ಲೂ 12 ನೇ ಆಟಗಾರನಾಗಿ ನೀರು ಸರಬರಾಜು ಮಾಡುವುದು, ಆಹಾರ ವಿತರಿಸಿವುದು, ಅತ್ತಿತ್ತ ಓಡಾಡಿಕೊಂಡು ಒಳ್ಳೆಯ 12 ನೇ ಆಟಗಾರನ ಕೆಲಸ ಮಾಡುತ್ತೇನೆ. ಅವಕಾಶ ಸಿಕ್ಕಾಗ ಸರಿಯಾಗಿಯೇ ಬಳಸಿಕೊಳ್ತೇನೆ ಎಂದು ಧವನ್ ನಗುತ್ತಲೇ ಉತ್ತರಿಸಿದ್ದಾರೆ.