ಕೋಲ್ಕೊತ್ತಾ: ಕುಲದೀಪ್ ಯಾದವ್ ಎಂಬ ಚಿನಾಮನ್ ಬೌಲರ್ ನನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪರಿಚಯಿಸಿದ್ದು ಅಂದು ಟೀಂ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ. ಇದೇ ಕಾರಣಕ್ಕೆ ಕುಂಬ್ಳೆ ಮತ್ತು ಕೊಹ್ಲಿ ನಡುವೆ ಅಸಮಾಧಾನ ಹೊಗೆಯಾಡಿತ್ತು ಎಂದು ವರದಿಯಾಗಿತ್ತು.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಗಾಯಗೊಂಡು ಹೊರಗುಳಿದಿದ್ದಾಗ, ಕೋಚ್ ಕುಂಬ್ಳೆ ಕುಲದೀಪ್ ಯಾದವ್ ರಲ್ಲಿದ್ದ ಪ್ರತಿಭೆ ಗಮನಿಸಿ ಕಣಕ್ಕಿಳಿಸಲು ನಿರ್ಧರಿಸಿದ್ದರು. ಇದು ಕೊಹ್ಲಿಯ ಗಮನಕ್ಕೆ ಬಂದಿರಲಿಲ್ಲ ಎನ್ನುವ ಕಾರಣಕ್ಕೆ ಕೋಚ್ ಮೇಲೆ ನಾಯಕ ಮುನಿಸಿಕೊಂಡಿದ್ದರು ಎನ್ನಲಾಗಿತ್ತು.
ಅಂತೂ ಮೊದಲ ಪಂದ್ಯದಲ್ಲೇ ಅದ್ಭುತ ಬೌಲಿಂಗ್ ಮಾಡಿದ ಕುಲದೀಪ್ ಇಂದು ಮತ್ತೆ ಅದೇ ಆಸ್ಟ್ರೇಲಿಯಾ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಅಂದು ಕೋಚ್-ನಾಯಕನ ನಡುವೆ ಇದೇ ಯುವ ಬೌಲರ್ ನ ಆಯ್ಕೆ ವಿಷಯಕ್ಕೆ ಕಿತ್ತಾಟ ನಡೆದಿತ್ತು ಎಂಬ ಸುದ್ದಿ ಬಂದಿತ್ತು. ಅಂದು ಕುಂಬ್ಳೆ, ಕುಲದೀಪ್ ನ ವಿಶೇಷ ಕೌಶಲ್ಯ ಗಮನಿಸಿ ಅವಕಾಶ ನೀಡದೇ ಇರುತ್ತಿದ್ದರೆ, ಇಂದು ಕುಲದೀಪ್ ಎದುರಾಳಿಗಳಿಗೆ ಸಿಂಹಸ್ವಪ್ನರಾಗುತ್ತಿರಲಿಲ್ಲವೇನೋ. ಇಂದು ಎದುರಾಳಿಗಳು ಅವರ ಬೌಲಿಂಗ್ ನ್ನು ಎದುರಿಸಲೆಂದೇ ವಿಶೇಷವಾಗಿ ಸಜ್ಜಾಗುತ್ತಿದ್ದಾರೆ. ಆಗುವುದೆಲ್ಲಾ ಒಳ್ಳೆಯದಕ್ಕೇ ಅಂತಾರಲ್ಲಾ? ಹಾಗೇ ಅಂದು ಕೊಹ್ಲಿ-ಕುಂಬ್ಳೆ ನಡುವೆ ವಿರಸಕ್ಕೆ ಕಾರಣವಾಗಿದ್ದ ವಿಚಾರ ಇಂದು ಭಾರತ ತಂಡದ ಪಾಲಿಗೆ ಶುಭವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ