ಕಾನ್ಪುರ: ಬಾಂಗ್ಲಾದೇಶ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಲು ಟೀಂ ಇಂಡಿಯಾ ಕ್ರಿಕೆಟಿಗರು ನಿನ್ನೆ ಸಂಜೆ ಇಲ್ಲಿಗೆ ಬಂದಿಳಿದಿದ್ದಾರೆ. ಅದರಲ್ಲೂ ಕೊಹ್ಲಿ ಮತ್ತು ರೋಹಿತ್ ಅಭಿಮಾನಿಗಳ ಗಮನ ಸೆಳೆದರು.
ಮೊದಲ ಟೆಸ್ಟ್ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಪಂದ್ಯವನ್ನು ಭಾರತ ತಂಡ ಭಾರೀ ಅಂತರದಿಂದ ಗೆದ್ದು ಬೀಗಿತ್ತು. ಇದೀಗ ಭಾರತ ಸರಣಿಯಲ್ಲಿ 1-0 ರಿಂದ ಮುನ್ನಡೆಯಲ್ಲಿದೆ. ಎರಡನೇ ಪಂದ್ಯವನ್ನು ಡ್ರಾ ಮಾಡಿಕೊಂಡರೂ ತಂಡ ಸರಣಿ ಗೆಲ್ಲವುದರ ಜೊತೆಗೆ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ನಂ.1 ಪಟ್ಟ ಉಳಿಸಿಕೊಳ್ಳಲಿದೆ.
ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 2 ರವರೆಗೆ ದ್ವಿತೀಯ ಟೆಸ್ಟ್ ಪಂದ್ಯ ನಡೆಯಲಿದೆ. ಎರಡು ದಿನ ಕುಟುಂಬದ ಜೊತೆ ವಿಶ್ರಾಂತಿ ಪಡೆದುಕೊಂಡ ಕ್ರಿಕೆಟಿಗರು ಈಗ ಕಾನ್ಪುರಕ್ಕೆ ಬಂದಿಳಿದಿದ್ದಾರೆ. ಅವರಿಗೆ ಮುತ್ತಿನ ಹಾರ ಹಾಕಿ ಹಣೆಗೆ ತಿಲಕವಿಟ್ಟು ಸಾಂಪ್ರದಾಯಿಕವಾಗಿ ಸ್ವಾಗತ ನೀಡಲಾಯಿತು.
ಇಂದಿನಿಂದಲೇ ಟೀಂ ಇಂಡಿಯಾ ಕ್ರಿಕೆಟಿಗರು ಮೈದಾನದಲ್ಲಿ ಅಭ್ಯಾಸಕ್ಕಿಳಿಯುವ ಸಾಧ್ಯತೆಯಿದೆ. ಭಾರತ ಇದುವರೆಗೆ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸೋತಿಲ್ಲ. ಈ ಪಂದ್ಯವನ್ನೂ ಗೆದ್ದು ಆ ದಾಖಲೆಯನ್ನು ಉಳಿಸಿಕೊಳ್ಳಲು ರೋಹಿತ್ ಪಡೆ ಪ್ರಯತ್ನ ಪಡಲಿದೆ.