ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ರೋಚಕವಾಗಿ 151 ರನ್ ಗಳಿಂದ ಗೆದ್ದುಕೊಂಡಿದೆ.
ನಿನ್ನೆ ಭಾರತ ಸೋಲಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ 9 ನೇ ವಿಕೆಟ್ ಗೆ ಜೊತೆಯಾದ ಮೊಹಮ್ಮದ್ ಶಮಿ-ಜಸ್ಪ್ರೀತ್ ಬುಮ್ರಾ ಜೋಡಿ ಅಜೇಯ 89 ರನ್ ಗಳ ಜೊತೆಯಾಟವಾಡಿ ಪಂದ್ಯಕ್ಕೆ ತಿರುವು ನೀಡಿದರು. ಭಾರತ ಎರಡನೇ ಇನಿಂಗ್ಸ್ ನಲ್ಲಿ 8 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿ ಡಿಕ್ಲೇರ್ ಮಾಡಿಕೊಳ್ಳುವುದರೊಂದಿಗೆ ಇಂಗ್ಲೆಂಡ್ ಗೆ 270 ರನ್ ಗಳ ಗೆಲುವಿನ ಗುರಿ ನೀಡಿತು.
ಈ ಪಂದ್ಯ ಡ್ರಾ ಆಗಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಮತ್ತೆ ಬೌಲಿಂಗ್ ನಲ್ಲಿ ಕಮಾಲ್ ಮಾಡಿದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಆರಂಭದಲ್ಲೇ ಎರಡು ವಿಕೆಟ್ ಕಿತ್ತು ಇಂಗ್ಲೆಂಡ್ ಕುಸಿತಕ್ಕೆ ನಾಂದಿ ಹಾಡಿದರು. 4 ವಿಕೆಟ್ ಕಿತ್ತ ಮೊಹಮ್ಮದ್ ಸಿರಾಜ್ ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ನೀಡಿದರು. ಮೊದಲ ಇನಿಂಗ್ಸ್ ನಲ್ಲಿ 180 ರನ್ ಗಳಿಸಿದ್ದ ನಾಯಕ ಜೋ ರೂಟ್ 33 ರನ್ ಗೆ ಔಟಾಗುವುದರೊಂದಿಗೆ ಭಾರತದ ಗೆಲುವು ಖಚಿತವಾಯ್ತು. ಅಂತಿಮವಾಗಿ ಇಂಗ್ಲೆಂಡ್ ಕೇವಲ 120 ರನ್ ಗಳಿಗೆ ಆಲೌಟ್ ಆಯಿತು. ಒಟ್ಟಾರೆ ನಾಲ್ಕು ಬ್ಯಾಟ್ಸ್ ಮನ್ ಗಳು ಶೂನ್ಯಕ್ಕೆ ಔಟಾಗಿದ್ದು ವಿಶೇಷ. ಇದರೊಂದಿಗೆ ಭಾರತ ಮೊದಲ ಪಂದ್ಯದಲ್ಲಿ ಮಳೆಯಿಂದಾಗಿ ಕಳೆದುಕೊಂಡಿದ್ದ ಗೆಲುವನ್ನು ಈ ಪಂದ್ಯದಲ್ಲಿ ವೀರೋಚಿತವಾಗಿ ಪಡೆದುಕೊಂಡಿತು.