ಸೆಂಚೂರಿಯನ್: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಅಂತರದಿಂದ ಹೀನಾಯವಾಗಿ ಸೋತ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೇಸರ ಹೊರಹಾಕಿದ್ದಾರೆ.
ಮೂರೇ ದಿನಗಳಲ್ಲಿ ಪಂದ್ಯ ಮುಗಿದಿತ್ತು. ಭಾರತೀಯ ಬ್ಯಾಟಿಗರು ಆಫ್ರಿಕಾ ವೇಗದ ದಾಳಿಗೆ ತತ್ತರಿಸಿ ಹೋಗಿದ್ದರು. ಆದರೆ ಟೀಂ ಇಂಡಿಯಾ ಬೌಲರ್ ಗಳಿಂದ ಅಂತಹ ಪ್ರದರ್ಶನ ಬರಲಿಲ್ಲ. ಈ ಬಗ್ಗೆ ನಾಯಕ ರೋಹಿತ್ ಶರ್ಮಾ ಪಂದ್ಯದ ನಂತರ ಮಾತನಾಡಿದ್ದಾರೆ.
ಬುಮ್ರಾ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು. ಅವರ ಗುಣಮಟ್ಟ ಎಂತಹದ್ದು ಎಂದು ನಮಗೆಲ್ಲರಿಗೂ ಗೊತ್ತು. ಆದರೆ ಅವರಿಗೆ ಇತರ ಬೌಲರ್ ಗಳಿಂದ ಸಪೋರ್ಟ್ ಬೇಕಾಗಿತ್ತು. ಅದು ಸಿಗಲೇ ಇಲ್ಲ. ಆದರೆ ಇದು ಸಹಜ. ಎಲ್ಲಾ ಬೌಲರ್ ಗಳು ಶಕ್ತಿಮೀರಿ ಪ್ರಯತ್ನಿಸಿದರು. ಆದರೆ ಯಾವುದೂ ನಮ್ಮ ಪರವಾಗಿ ಇರಲಿಲ್ಲ. ಆದರೆ ಇಂತಹ ಪಂದ್ಯಗಳು ನಮಗೆ ಪಾಠವಾಗಲಿದೆ ಎಂದು ಬೇಸರ ಹೊರಹಾಕಿದ್ದಾರೆ.
ಇನ್ನು ಬ್ಯಾಟಿಂಗ್ ನಲ್ಲೂ ಎರಡನೇ ಇನಿಂಗ್ಸ್ ನಲ್ಲಿ ಭಾರತದ ಪರ ವಿರಾಟ್ ಕೊಹ್ಲಿ ಮಾತ್ರ ಏಕಾಂಗಿ ಹೋರಾಟ ನಡೆಸಿದರು. ಇಡೀ ತಂಡ ಗಳಿಸಿದ್ದು 131 ರನ್ ಆಗಿದ್ದರೆ ಇದರಲ್ಲಿ ಕೊಹ್ಲಿ ಕೊಡುಗೆಯೇ 76 ರನ್ ಗಳಾಗಿತ್ತು. ಹಾಗಿದ್ದಲ್ಲಿ ಉಳಿದ ಬ್ಯಾಟಿಗರು ಎಷ್ಟರಮಟ್ಟಿಗೆ ವೈಫಲ್ಯ ಅನುಭವಿಸಿದ್ದರು ಎಂದು ಲೆಕ್ಕಾಚಾರ ಹಾಕಬಹುದು.