ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಗ ಕೆಎಲ್ ರಾಹುಲ್ ಶತಕ ಸಿಡಿಸಿ ಮಿಂಚಿದ್ದಾರೆ.
ಬಹುಶಃ ಕೆಎಲ್ ರಾಹುಲ್ ಪ್ರತೀ ಬಾರಿ ಶತಕ ಸಿಡಿಸುವಾಗಲೂ ಒತ್ತಡದಲ್ಲೇ ಶತಕ ಗಳಿಸುವ ಪರಿಸ್ಥಿತಿ ಬರುತ್ತದೆಯೇನೋ. ವಿಶ್ವಕಪ್ ಸಂದರ್ಭದಲ್ಲಿಯೂ ಅವರು ಇನ್ನೇನು ಪಂದ್ಯ ಮುಗಿಯುತ್ತಿದೆ ಎನ್ನುವಾಗ ಶತಕ ಗಳಿಸುವ ಒತ್ತಡದಲ್ಲಿದ್ದರು. ಆ ಸಂದರ್ಭದಲ್ಲಿ ಒಮ್ಮೆ ಶತಕ ವಂಚಿತರಾಗಿದ್ದರೆ ಮತ್ತೊಮ್ಮೆ ಸಿಕ್ಸರ್ ಸಿಡಿಸಿ ಶತಕ ಗಳಿಸಿಯೇ ಬಿಟ್ಟಿದ್ದರು.
ಇಂದೂ ಅವರದ್ದು ಅದೇ ಪರಿಸ್ಥಿತಿಯಾಗಿತ್ತು. ಆಗಲೇ 8 ವಿಕೆಟ್ ಕಳೆದುಕೊಂಡು ಬಾಲಂಗೋಚಿಗಳನ್ನು ಇಟ್ಟುಕೊಂಡು ರಾಹುಲ್ ಶತಕ ಸಿಡಿಸಿದ್ದೇ ಪವಾಡ. ಕೊನೆಯ ಹಂತದಲ್ಲಿ ಬೌಂಡರಿ, ಸಿಕ್ಸರ್ ಸಿಡಿಸಿ ಶತಕದ ಸಮೀಪ ಬಂದಾಗ ಭಾರತದ 9 ನೇ ವಿಕೆಟ್ ಪತನವಾಗಿತ್ತು.
ಆ ಸಂದರ್ಭದಲ್ಲಿ ಕೊನೆಯ ಬ್ಯಾಟಿಗನಾಗಿ ಚೊಚ್ಚಲ ಪಂದ್ಯವಾಡುತ್ತಿರುವ ಪ್ರಸಿದ್ಧ ಕೃಷ್ಣ ಕ್ರೀಸ್ ಗೆ ಬಂದಿದ್ದರು. ಹೇಗಾದರೂ ಮಾಡಿ ತಮ್ಮ ಬಳಿ ಸ್ಟ್ರೈಕ್ ಇರುವಂತೆ ನೋಡಿಕೊಳ್ಳಲು ಕೆಎಲ್ ರಾಹುಲ್ ಚೆಂಡು ಕೀಪರ್ ಕೈ ಸೇರಿದ್ದರೂ ಓಡಿ ರನ್ ಕದ್ದಿದ್ದರು.
ಆದರೆ ಇನ್ನೊಂದು ಓವರ್ ನಲ್ಲಿ ಪ್ರಸಿದ್ಧ ಸ್ಟ್ರೈಕ್ ಮಾಡಲೇಬೇಕಾಗಿತ್ತು. ಆದರೆ ಇತ್ತ ಕಡೆ ಇದ್ದ ರಾಹುಲ್ ಗೆ ಟೆನ್ ಷನ್. ಹೀಗಾಗಿ ಚೆಂಡು ಕೊಂಚ ದೂರದಲ್ಲೇ ತಳ್ಳಿದರೂ ಕನ್ನಡದಲ್ಲೇ ಓಡು ಓಡೋ ಎಂದು ಕನ್ನಡದಲ್ಲಿ ಹೇಳಿ ರನ್ ಕದಿಯಲು ಯತ್ನಿಸಿದರು. ಹೇಳಿ ಕೇಳಿ ಇಬ್ಬರೂ ಕನ್ನಡಿಗರೇ. ಹೀಗಾಗಿ ಕ್ರೀಸ್ ನಲ್ಲಿದ್ದಷ್ಟೂ ಹೊತ್ತು ರಾಹುಲ್ ಮತ್ತು ಪ್ರಸಿದ್ಧ ಕನ್ನಡದಲ್ಲೇ ಮಾತನಾಡಿಕೊಂಡು ಹೇಗೋ ಶತಕ ಸಿಡಿಸುವವರೆಗೆ ಸಂಭಾಳಿಸಿಕೊಂಡರು. ಅವರಿಬ್ಬರ ಕನ್ನಡ ಸಂಭಾಷಣೆ ಎಲ್ಲರ ಗಮನ ಸೆಳೆಯಿತು.