ಸೆಂಚೂರಿಯನ್: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದಲ್ಲಿ ಕೆಎಲ್ ರಾಹುಲ್ ಗೆ ಸ್ಥಾನ ನೀಡುತ್ತಿರವ ಬಗ್ಗೆ ಕೆಲವು ಮಾಜಿ ಕ್ರಿಕೆಟಿಗರಿಂದ ಅಪಸ್ವರ ಕೇಳಿಬಂದಿದೆ.
ಇಶಾನ್ ಕಿಶನ್ ಸರಣಿಯಿಂದ ಹೊರಬಿದ್ದ ಮೇಲೆ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನ ಖಾಲಿಯಿದೆ. ಟೆಸ್ಟ್ ನಲ್ಲೂ ವಿಕೆಟ್ ಕೀಪಿಂಗ್ ಮಾಡಲು ತಾನು ಸಿದ್ಧ ಎಂದು ಕೆಎಲ್ ರಾಹುಲ್ ಈಗಾಗಲೇ ಹೇಳಿದ್ದಾರೆ.
ಹೀಗಾಗಿ ಕೋಚ್ ರಾಹುಲ್ ದ್ರಾವಿಡ್ ಕೂಡಾ ಪ್ರತಿಭಾವಂತ, ನಂಬಿಕಸ್ಠ ಬ್ಯಾಟಿಗರೂ ಆಗಿರುವ ರಾಹುಲ್ ಗೆ ವಿಕೆಟ್ ಕೀಪಿಂಗ್ ಜವಾಬ್ಧಾರಿಯನ್ನೂ ನೀಡಿ ಆಡುವ ಬಳಗದಲ್ಲಿ ಸೇರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕೆಲವರು ಅಪಸ್ವರವೆತ್ತಿದ್ದು, ರಾಹುಲ್ ರನ್ನು ಆಡುವ ಬಳಗದಲ್ಲಿ ಸೇರಿಸುವ ಸಲುವಾಗಿ ಖಾಯಂ ವಿಕೆಟ್ ಕೀಪರ್ ಅಲ್ಲದೇ ಇದ್ದರೂ ಅವರಿಗೆ ಹೆಚ್ಚುವರಿ ಜವಾಬ್ಧಾರಿ ಹೊರಿಸಲಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ.
ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ದ.ಆಫ್ರಿಕಾದಂತಹ ಕ್ಲಿಷ್ಟಕರ ಪಿಚ್ ನಲ್ಲಿ ತಂಡಕ್ಕೆ ಒಬ್ಬ ವೃತ್ತಿಪರ ವಿಕೆಟ್ ಕೀಪರ್ ಅಗತ್ಯವಿದೆ. ರಣಜಿಯಂತಹ ದೇಶೀಯ ಕ್ರಿಕೆಟ್ ನಲ್ಲಿ ವಿಕೆಟ್ ಕೀಪಿಂಗ್ ಮಾಡಿ ಅನುಭವವಿರುವ ಪರಿಣಿತರನ್ನು ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸೇರಿಸಬೇಕು ಎಂದು ಕೆಎಲ್ ರಾಹುಲ್ ಗೆ ವಿಕೆಟ್ ಕೀಪಿಂಗ್ ಜವಾಬ್ಧಾರಿ ನೀಡುತ್ತಿರುವುದನ್ನು ಪ್ರಶ್ನಿಸಿದ್ದಾರೆ.
ಈ ಹಿಂದೆಯೂ ಕೆಎಲ್ ರಾಹುಲ್ ಕಳಪೆ ಫಾರ್ಮ್ ನಲ್ಲಿದ್ದಾಗಲೂ ತಂಡದಲ್ಲಿ ಅವಕಾಶ ಪಡೆದಾಗ ಕರ್ನಾಟಕದವರೇ ಆದ ಕಾರಣ ರಾಹುಲ್ ದ್ರಾವಿಡ್ ಕೃಪಾಕಟಾಕ್ಷದಿಂದಲೇ ಅವರಿಗೆ ಸ್ಥಾನ ಸಿಗುತ್ತಿದೆ ಎಂದು ಆರೋಪಿಸಿದವರಿದ್ದರು. ಆದರೆ ವಿಶ್ವಕಪ್ ನಲ್ಲಿ ರಾಹುಲ್ ಭರ್ಜರಿ ಆಟವಾಡಿ ಟೀಕಾಕಾರರ ಬಾಯಿಮುಚ್ಚಿಸಿದ್ದರು.